2ನೇ ಹಂತದ ಪರೀಕ್ಷೆಗೆ ಸೂಳೆಕೆರೆ ನೀರು

mkg1
Published on

ಚನ್ನಗಿರಿ: ಸೂಳೆಕೆರೆ ಕೆರೆಯ ನೀರನ್ನು 2ನೇ ಹಂತದ ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.

ಸೂಳೆಕೆರೆ ಕೆರೆಯಿಂದ ವಿತರಣೆ ಮಾಡುವಂತ ನೀರು ಕಲುಷಿತಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ನೀರು ವಿತರಣಾ ಘಟಕದಲ್ಲಿ ಮತ್ತೇನಾದರು ಲೋಪಗಳು ಕಂಡುಬಂದಲ್ಲಿ ಕೂಡಲೇ ನೀರು ಪರಿಷ್ಕರಣೆಗೊಳ್ಳುವಂತೆ ತುರ್ತು ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರಬಾರದು. ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ನೀವೇ ಹೊಣೆ ಎಂದು ಎಚ್ಚರಿಸಿದರು.

ನೀರು ವಿತರಣಾ ಘಟಕದ ಎಲ್ಲ ವಿಭಾಗಗಳ ಪರಿಶೀಲನೆ ನಡೆಸಿ ನೀರಿನ ಪರಿಷ್ಕರಣೆ ಮತ್ತು ಶುದ್ಧೀಕರಣಕ್ಕೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಲೋಪಗಳಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕೂಡಲೇ ಸರ್ವೇ ನಡೆಸಿ ಕಲುಷಿತ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆಯ ನೀರು ವಿತರಣಾ ಘಟಕವು ದುರಸ್ತಿಯಾಗುವವರೆಗೆ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಜನರಿಗೆ ನೀರಿನ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ತಹಸೀಲ್ದಾರ್ ಪಿ.ಐ. ಯರ‌್ರಿಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಕುಮಾರ್, ತಾಪಂ ಕಾರ್ಯನಿರ್ವಾಣಾಧಿಕಾರಿ ಉತ್ತಮ್, ಪುರಸಭೆ ಮುಖ್ಯಾಧಿಕಾರಿ ಕೆ. ಪರಮೇಶ್, ಪುರಸಭೆಯ ಇಂಜಿನಿಯರ್ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net