

ಎಚ್.ಡಿ.ಕೋಟೆ : ಕೇರಳದ ವಯನಾಡು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರಲಿದೆ. ಹಾಗಾಗಿ ತಾಲೂಕಿನ ಅಧಿಕಾರಿಗಳು ಕೇರಳದ ಅಧಿಕಾರಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದುಕೊಂಡು ತಾಲೂಕಿನಲ್ಲಿ ಯಾವುದೇ ಪ್ರಾಣಹಾನಿ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಕಬಿನಿ ಜಲಾಶಯಕ್ಕೆ ಬುಧವಾರ ಅಧಿಕಾರಿಗಳ ಜತೆ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ಮಾಡಿ ನಂತರ ಅಧಿಕಾರಿಗಳ ಜತೆ ಸಭೆ ನಡೆಸಿ ಅವರು ಮಾತನಾಡಿದರು.
ಈಗಾಗಲೇ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದು,್ದ 45 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಹಾಗಾಗಿ ನದಿ ಅಂಚಿನಲ್ಲಿ ಬರುವ ಗ್ರಾಮಗಳಲ್ಲಿ ಪ್ರವಾಹ ಕಂಡು ಬರುವ ಕಾರಣ ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಗ್ರಾಮ ಲೆಕ್ಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನದಿಗೆ ಸಾರ್ವಜನಿಕರು ಹೋಗದಂತೆ ಅವರಿಗೆ ಜಾಗೃತಿ ಮೂಡಿಸಬೇಕು. ಪ್ರತಿ ಒಂದು ಗಂಟೆಗೆ ತಹಸೀಲ್ದಾರ್‌ಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ವಯನಾಡು ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 50 ಮಿಮೀ ಮಳೆ ಆಗಿದ್ದು, ನೀರು ಜಲಾಶಯಕ್ಕೆ ಹರಿದು ಬರಲು 24 ಗಂಟೆ ಆಗಲಿದೆ. ಬಾರಿ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಕಾರಣ ಕಬಿನಿ ನೀರಾವರಿ ಅಧಿಕಾರಿಗಳು ಒಳಹರಿವಿನ ಪ್ರಮಾಣ ನೋಡಿಕೊಂಡು ಜಲಾಶಯದಿಂದ ನದಿಗೆ ನೀರು ಹರಿಸಬೇಕು ಎಂದು ತಿಳಿಸಿದರು.
ತಾಲೂಕು ಮಟ್ಟದ ಕಾರ್ಯಾಪಡೆ ಸಮಿತಿ ಕಬಿನಿ ಹಿನ್ನೀರಿನಿಲ್ಲಿ ಹಾಗೂ ನದಿ ಪಾತ್ರದಲ್ಲಿ ಯಾವುದೇ ಪ್ರಾಣ ಹಾನಿ ಆಗದಂತೆ ಕ್ರಮ ವಹಿಸಬೇಕು. ಪರಿಶೀಲನೆ ನಡೆಸಿದ ವರದಿಯನ್ನು ನೀಡಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವುದರಿಂದ ಈಗಾಗಲೇ ಜಲಾಶಯದ ಮುಂಭಾಗದ ಬಿದರಹಳ್ಳಿ ಸೇತುವೆ ಮುಳುಗಡೆ ಆಗಿದ್ದು, ಅದೇ ರೀತಿ ಮಾದಪುರ ಮತ್ತು ಹೊಮ್ಮರಗಳ್ಳಿ ಸೇತುವೆ ಮುಳುಗಡೆ ಆಗಲಿದೆ. ಯಾವುದೇ ವಾಹನ ಸಂಚಾರ ಆಗದಂತೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ನಂತರ ಜಿಲ್ಲಾಧಿಕಾರಿಗಳು ಸರಗೂರು ತಾಲೂಕಿನ ನುಗು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.