ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ; ಬೆಳೆ ಹಾನಿಯ ಪರಿಹಾರದ ಭರವಸೆ

Screenshot_2025-08-29-06-10-28-91.jpg
Published on

ಧಾರವಾಡ: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಧಾರವಾಡ ತಾಲೂಕಿನ ಮಾರಡಗಿ, ಶಿವಳ್ಳಿ, ಹೆಬ್ಬಳ್ಳಿ, ಅಮ್ಮಿನಭಾವಿ, ಮರೇವಾಡ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ, ಮಳೆ ಹಾನಿ ಮತ್ತು ಬೆಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿದರು. ಕೆಲವು ರೈತರ ಜಮೀನುಗಳಲ್ಲಿ ಹಸಿರು ಕಾಣುತ್ತಿದ್ದರೂ ಅದರಲ್ಲಿ ಬೆಳೆ ಇಲ್ಲ, ಬೆಳೆಗಳಲ್ಲಿ ಕಾಳು ಮೂಡಿಲ್ಲ. ಒಂದು ರೀತಿಯಲ್ಲಿ ಹಸಿರು ಬರದ ದರ್ಶನವಾಯಿತು. ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಅನೇಕ ರೈತರು ಬೆಳೆ ಹಾನಿ ಪರಿಹಾರ ಬಿಡುಗಡೆಗೆ ಮತ್ತು ಬೆಳೆ ವಿಮೆ ಪರಿಹಾರ ಜಮೆಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಆರಂಭದಲ್ಲಿ ಮುಂಗಾರು ಬೆಳೆಗಳು ಉತ್ತಮ ಫಸಲು ನೀಡುವ ನಿರೀಕ್ಷೆಯಲ್ಲಿದ್ದರೂ, ನಂತರದ ದಿನಗಳಲ್ಲಿ ಆರಂಭವಾದ ನಿರಂತರ ಮಳೆ, ಹವಾಮಾನ ವೈಪರಿತ್ಯದಿಂದಾಗಿ ಕೀಡೆ, ರೋಗ ರುಜಿನಗಳಿಂದ ಬೆಳೆಗಳು ಕುಂಠಿತವಾದವು. ಇದರಿಂದ ನಿರೀಕ್ಷತ ಫಸಲು ಹುಸಿ ಎನಿಸಿತು. ಕೆಲವು ರೈತರು ಮರುಬಿತ್ತನೆ ಮಾಡಿದ್ದರಿಂದ ಜಮೀನುಗಳಲ್ಲಿ ಹಸಿರು ಕಾಣಿಸುತ್ತಿದೆ. ಆದರೆ ಅವುಗಳಲ್ಲಿ ಫಸಲು ಕಾಣುತ್ತಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಇಡೀ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈಗಾಗಲೇ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ತಂಡಗಳು, ಗ್ರಾಮವಾರು ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆಯನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಬೆಳೆ ಹಾನಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ದತ್ತಾಂಶಗಳನ್ನು ದಾಖಲಿಸಲು ನಿರ್ದೇಶನ ನೀಡಲಾಗಿದೆ ಎಂದರು.

ಬೆಳೆ ವಿಮೆ ಮಾಡಿಸಿರುವ ರೈತರಿಗೆ ಈಗಾಗಲೇ ಮಧ್ಯಂತರ ಪರಿಹಾರ ಪಡೆಯಲು ಹಾನಿ ಸಂಭವಿಸಿದ 72 ಗಂಟೆಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ಧಾರವಾಡ ತಾಲೂಕಿನಲ್ಲಿ ಸುಮಾರು 2,500 ಕ್ಕೂ ಹೆಚ್ಚು ರೈತರು ದಾಖಲಾತಿಗಳೊಂದಿಗೆ ತಮ್ಮ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು 26,000 ಕ್ಕೂ ಹೆಚ್ಚು ಅರ್ಜಿಗಳು ವಿಮಾ ಕಂಪನಿಯಿಂದ ಪರಿಹಾರಕ್ಕಾಗಿ ರೈತರಿಂದ ಅರ್ಜಿ ಸಲ್ಲಿಕೆಯಾಗಿವೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಪರಿಶೀಲಿಸಿ, ಸೂಕ್ತ ತುರ್ತು ಕ್ರಮ ವಹಿಸಲು ವಿಮಾ ಕಂಪನಿಯ ಪ್ರತಿನಿಧಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಸರ್ಕಾರದ ಸೂಚನೆ ಇದ್ದರೂ ಕೆಲವು ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ರೈತರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಾತಿಗೆ ನೋಟಿಸ್ ನೀಡಿ, ಕಿರಿಕಿರಿ ಮಾಡುತ್ತಿದ್ದಾರೆ ಎಂದು ರೈತರು ದೂರು ಸಲ್ಲಿಸುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತವು ರೈತರಿಗೆ ಸಾಲ ವಾಸೂಲಾತಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಸರ್ಕಾರ ನೀಡುವ ಬೆಳೆ ಪರಿಹಾರ, ವಿಮೆ ಪರಿಹಾರದ ಸಹಾಯಧನವನ್ನು ಆಯಾ ರೈತರ ಒಪ್ಪಿಗೆ ಇಲ್ಲದೇ ಸಾಲಕ್ಕೆ ಜಮೆ ಮಾಡುವುದು ಅಥವಾ ಸಾಲದ ಖಾತೆಗಳಿಗೆ ವರ್ಗಾಯಿಸುವುದು ಅಪರಾಧ. ಆದರೆ ಈ ಕುರಿತ ಎಚ್ಚರಿಕೆಯ ಮಧ್ಯೆಯು ಕೆಲವು ಬ್ಯಾಂಕ್‍ಗಳ ವ್ಯವಸ್ಥಾಪಕರು ಸಾಲ ವಸೂಲಾತಿಗೆ ನೋಟಿಸ್ ನೀಡಿ, ಬೆಳೆ ನಷ್ಟದ ಸಂದರ್ಭದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದ್ದಾರೆ. ಈ ಕುರಿತು ಎಚ್ಚರಿಕೆ ವಹಿಸಲು ಮತ್ತು ರೈತರಿಗೆ ತೊಂದರೆ ಆಗದಂತೆ ಕ್ರಮವಹಿಸಲು ಎಲ್ಲ ಬ್ಯಾಂಕ್‍ಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಮತ್ತು ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರು ಪರಿಶೀಲಿಸಿ, ಸರ್ಕಾರ ಮತ್ತು ಜಿಲ್ಲಾಡಳಿತ ನೀಡಿರುವ ನಿರ್ದೇಶನ ಪಾಲನೆಯಾಗುವಂತೆ ನೋಡಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರೈತರ ಎಲ್ಲ ಸಮಸ್ಯೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಸರ್ಕಾರದಿಂದ ಸಾಧ್ಯವಾದ ಎಲ್ಲಾ ನೆರವು ದೊರಕುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಬೆಳೆ ವಿಮಾ ಯೋಜನೆಯಡಿಯಲ್ಲಿ ರೈತರು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಹಾನಿ ಅಂದಾಜು ಪ್ರಕ್ರಿಯೆ ಆರಂಭವಾಗಿದೆ. ಶೀಘ್ರದಲ್ಲೇ ಪರಿಹಾರ ವಿತರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಸೋಯಾಬಿನ್ ಬೆಳೆ ವೀಕ್ಷಣೆ: ಮಾರಡಗಿ ಗ್ರಾಮದಲ್ಲಿನ ಮಲ್ಲಿಕಾರ್ಜುನ ಕುರಿ ಅವರ ಎರಡು ಎಕರೆ ಸೋಯಾಬಿನ್ ಬೆಳೆ ಸಂಪೂರ್ಣ ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿ ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ರೈತರು ಮಾತನಾಡಿ, ನೋಡುವರ ಕಣ್ಣಿಗೆ ಹಸಿರಾಗಿ ಕಂಡರು, ಬೆಳೆ ಸರಿಯಾಗಿ ಕಾಯಿ ಬಿಟ್ಟಿರುವುದಿಲ್ಲ. ಆದರೆ ಯಾವುದೇ ರೀತಿ ಪ್ರಯೋಜನಕ್ಕೆ ಬಾರದೇ ಇರುವ ರೀತಿಯಲ್ಲಿ ಬೆಳೆ ಇದೆ. ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ, ಸಾಲ ತೀರಿಸುವುದು ಕಷ್ಟವಾಗುತ್ತಿದೆ ಎಂದು ತಮ್ಮ ಅಳಿಲನ್ನು ವ್ಯಕ್ತಪಡಿಸಿದರು.

ಅದೇ ರೀತಿ ಪಕ್ಕದಲ್ಲಿ ಇರುವ ಮುತ್ತು ಬಳ್ಳಾರಿ ಅವರ ಜಮೀನಿಗೂ ಜಿಲ್ಲಾಧಿಕಾರಿ ಅವರು ಭೇಟಿ ನೀಡಿದರು. ಮೊದಲು 2 ಎಕ್ಕರೆ ಉದ್ದು ಬಿತ್ತನೆ ಮಾಡಿದ್ದೆವು. ಆದರೆ ಅದು ಮಳೆಯಿಂದ ಸಂಪೂರ್ಣವಾಗಿ ನಾಶವಾಯಿತು. ಆದ್ದರಿಂದ ಮತ್ತೆ ಸೌತೆಕಾಯಿ ಬಿತ್ತನೆ ಮಾಡಿದೆವು ಅದು ಕೂಡ ಮಳೆಯಿಂದ ಬೆಳೆ ಸಂಪೂರ್ಣ ನಾಶವಾಗಿರುವುದನ್ನು ತೋರಿಸಿ, ದುಃಖ ಹಂಚಿಕೊಂಡರು.

ಮಾರಡಗಿ ಗ್ರಾಮದ ರೈತರಾದ ಜಿ.ಎಸ್.ಪಾಟೀಲಕುಲಕರ್ಣಿ, ಪಕೀರಪ್ಪ ವನಹಳ್ಳಿ, ಹನುಮಂತ ಮಾರಡಗಿ, ಮುತ್ತುಂ ದರಗದ, ಸೋಮಣ್ಣ ಹುಬ್ಬಳ್ಳಿ, ಮುತ್ತುಂ ಸಾಬ್ ಹಾಗೂ ಹೆಬ್ಬಳ್ಳಿ ಗ್ರಾಮದ ರೈತರಾದ ಸಿ.ಬಿ. ಮಟ್ಟಿ, ಗಿರಿ ಮಲ್ಲಯ್ಯ ಉಮಚಗಿಮಠ, ಬಸವರಾಜ ತಂಬಾಕದ, ಬಸವರಾಜ ನಾಯ್ಕರ, ಬಾಳು ಕುಡೇಕಾರ, ವಿಠ್ಠಲ ಬೋವಿ, ಸುರೇಶ ಬನ್ನಿಗಿಡದ, ನಿಂಗಪ್ಪ ಶಿವಳ್ಳಿ, ಮಲ್ಲಪ್ಪ ನವಲೂರು ಹಾಗೂ ಇತರರು ಉಪಸ್ಥಿತರಿದ್ದರು.

ಹೆಸರು ಬೆಳೆ ವೀಕ್ಷಣೆ: ಶಿವಳ್ಳಿ ಗ್ರಾಮದಲ್ಲಿನ ಕರಿಬಸಪ್ಪ ರೋಣದ ಅವರು 4 ಎಕರೆ 12 ಗುಂಟೆ ಜಮೀನಿನಲ್ಲಿ ಬೆಳೆದ ಹೆಸರು ಬೆಳೆ ಹಾಗೂ ಪವಾಡೆಪ್ಪ ಕಿತ್ತೂರು ಅವರು 3 ಎಕರೆ 14 ಗುಂಟೆ ಜಮೀನಿಯಲ್ಲಿ ಬೆಳೆದ ಹೆಸರು ಬೆಳೆ ವೀಕ್ಷಣೆ ಮಾಡಿದರು.

ಶಿವಳ್ಳಿ ಗ್ರಾಮದ ರೈತರಾದ ಶಿವಾನಂದ ಲಂಬಿ, ಈರಣ್ಣ ಲಂಬಿ, ವಿರೂಪಾಕ್ಷ ಮುಗದ, ಮಲ್ಲಿಕಾರ್ಜುನ ಚಿನಗುಡಿ, ಬರಮಗೌಡ ಪಾಟೀಲ, ರಾಜು ಅಟ್ಟದಮಣಿ, ಮುದಕಪ್ಪ ಕಂಕೋಳ್ಳಿ, ಸಿದ್ದು ಹಾಲಪ್ಪನವರ, ರಾಜು ಮುದ್ದಿ, ಬಸಯ್ಯ ಬಕ್ಕಯ್ಯನವರ ಅವರು ಉಪಸ್ಥಿತರಿದ್ದರು.

ಮಾರಡಗಿ ಗ್ರಾಮದಲ್ಲಿನ ಮೂಗಪ್ಪ ಮಲ್ಲಪ್ಪ ಶಿವಳ್ಳಿ ಅವರ 4 ಎಕ್ಕರೆ ಜಮೀನಿನಲ್ಲಿ ಬೆಳೆದ ಉಳ್ಳಾಗಡ್ಡಿ ಬೆಳೆಯು ಸಹ ಎಲ್ಲವೂ ನೀರಿನಲ್ಲಿ ನಿಂತು ಕೊಳೆತು ಹೋಗಿದೆ. ಎಕರೆಗೆ 60 ರಿಂದ 80 ಸಾವಿರ ರೂಪಾಯಿ ಬರುವ ಬೆಳೆಯು ಸಂಪೂರ್ಣವಾಗಿ ಬೆಳೆ ಹಾಳಾಗಿರುವುದನ್ನು ತೋರಿಸಿ, ನಮಗೆ ಸೂಕ್ತವಾದ ಪರಿಹಾರವನ್ನು ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಯವರಿಗೆ ರೈತರು ಮನವಿ ಮಾಡಿಕೊಂಡರು.

ಮಳೆಯು ನಮ್ಮನ್ನು ಕಂಗೆಡಿಸಿದೆ, ಬೆಳೆ, ಮನೆ ಹಾನಿಯಾಗಿದೆ. ಆದರೆ ಜಿಲ್ಲಾಧಿಕಾರಿ ಅವರೇ ಸ್ವತಃ ಬಂದು ಸಮಸ್ಯೆಗಳನ್ನು ಕೇಳಿದ್ದೀರಿ ಹಾಗೂ ಭರವಸೆಯನ್ನು ಸಹ ನೀಡಿದ್ದೀರಿ. ಇದರಿಂದ ನಮಗೆ ನಿಟ್ಟುಸಿರು ಬಿಡುವಂತಾಗಿದೆ ಎಂದು ರೈತರು ಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಬೆಳೆ ಹಾನಿ ಪ್ರದೇಶಗಳ ಭೇಟಿ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕಿ ಜಯಶ್ರೀ ಹಿರೇಮಠ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಇಮ್ತಿಯಾಜ್ ಚಂಗಾಪೂರಿ, ತಹಸಿಲ್ದಾರ ಡಾ. ಎಚ್.ಹೂಗಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಅನಗೌಡರ, ಕೃಷಿ ಅಧಿಕಾರಿ ರೇಖಾ ಬೆಳ್ಳಟ್ಟಿ, ಮೋಹನ ಲಕ್ಕಮ್ಮನವರ, ಎಚ್.ಎಮ್.ಬಾದಾಮಿ ಹಾಗೂ ತೋಟಗಾರಿಕೆ ಇಲಾಖೆಯ ಯೋಗೇಂದ್ರ, ಅಮ್ಮಿನಭಾವಿ ಕಂದಾಯ ನಿರೀಕ್ಷಕ ಸಂಪತ್‍ಕುಮಾರ ಒಡೆಯರ್ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ರೈತ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net