ಪ್ರಜಾಪ್ರಭುತ್ವದ ಮಹತ್ವ ಸಾರಲು ಮಾನವ ಸರಪಳಿ

UDP-12-5-Sarapali
Published on

ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾಹಿತಿ | ಅಧಿಕಾರಿಗಳ ಟ್ರೆಕಿಂಗ್​ಗೆ ಚಾಲನೆ

ಉಡುಪಿ: ಪ್ರಜಾಪ್ರಭುತ್ವದ ಮಹತ್ವ ಸಾರಲು ಸರ್ಕಾರದ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ಬೈಂದೂರಿನ ಶಿರೂರು ಗೇಟ್​ನಿಂದ ಕಾಪು ಹೆಜಮಾಡಿ ಸೇತುವೆಯ ವರೆಗೆ ಸುಮಾರು 107 ಕಿ.ಮೀ. ಮಾನವ ಸರಪಳಿ ರಚಿಸಲಾಗುವುದು. ಈ ವಿಶೇಷ ಕಾರ್ಯಕ್ರಮ ಯಶಸ್ವಿಗೊಳಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚಣೆ ಪ್ರಯುಕ್ತ ಸೆ.15ರಂದು ಆಯೋಜಿಸಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಗುರುವಾರ ಬೆಳಗ್ಗೆ ಉಡುಪಿಯ ಕುಂಜಾರುಗಿರಿಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ನಡೆಸಿದ ಟ್ರೆಕಿಂಗ್​ಗೆ ಚಾಲನೆ ನೀಡಿ ಮಾತನಾಡಿದರು.

ಲಕ್ಷಕ್ಕೂ ಅಧಿಕ ಜನ

ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ಸಿಬ್ಬಂದಿ, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಹಕಾರಿ ಸ್ವ-ಸಹಾಯ ಸಂಗಳು, ರೋಟರಿ, ಲಯನ್ಸ್​, ರೆಡ್​ಕ್ರಾಸ್​ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿ ಲಾಂಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಅರುಣಕುಮಾರ್​ ಕೆ., ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸಿದ್ಧಲಿಂಗಯ್ಯ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕ ರವೀಂದ್ರ, ಕಾಪು ತಹಸೀಲ್ದಾರ್​ ಪ್ರತಿಭಾ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿ, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್​ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ 500 ಮೀಟರ್​ ಉದ್ದದ ಹಾಗೂ 3 ಮೀಟರ್​ ಅಗಲದ ಭಾರತ ಹಾಗೂ ಕರ್ನಾಟಕ ಧ್ವಜ ಪ್ರದರ್ಶನ ಮಾಡಲಾಗುವುದು. ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿ ಜಿಲ್ಲಾಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ.| ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net