ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಬದ್ಧ

0210 KALAGI 01 A
ಕಾಳಗಿಯ ರೌದ್ರಾವತಿ ನದಿ ದಡದಲ್ಲಿರುವ ಶ್ರೀ ವಿಷ್ಣು ತೀರ್ಥಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ನೀಡಿ ದರ್ಶನ ಪಡೆದರು. ತಹಸೀಲ್ದಾರ್ ಘಮಾವತಿ ರಾಠೋಡ್, ಸಿದ್ರಾಮ ದಂಡಗುಲಕರ್, ಜಗನ್ನಾಥ ಚಂದನಕೇರಿ ಇತರರಿದ್ದರು.
Published on

ಕಾಳಗಿ: ತಾಲೂಕಿನಲ್ಲಿನ ಐತಿಹಾಸಿಕ ಸ್ಥಳಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭರವಸೆ ನೀಡಿದರು.

ದಕ್ಷಿಣ ಕಾಶಿ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ದರ್ಶನ ಪಡೆದ ಅವರು, ಪುರಾತನ ದೇಗುಲದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವೆ. ಬೇಲೂರು, ಹಳೆಬೀಡಿನ ರೀತಿಯಲ್ಲಿಯೇ ಕಂಗೊಳಿಸುವ ನಮ್ಮಲ್ಲಿನ ಸ್ಮಾರಕಗಳ ರಕ್ಷಣೆ ಕಾರ್ಯ ಆಗಬೇಕಿದೆ. ಪ್ರತಿಯೊಬ್ಬರೂ ಶಿಲ್ಪ ಕಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ನೈಸರ್ಗಿಕ ಸಂಪತ್ತನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಳಿಕ ನೀಲಕಂಠ ಕಾಳೇಶ್ವರ ದೇವರಿಗೆ ಮಂಗಳಾರತಿ ಮಾಡಿ, ದರ್ಶನ ಪಡೆದರು. ಗಡಗಿ ಬಾವಿ, ವಿಷ್ಣು ತೀರ್ಥ, ರೌದ್ರಾವತಿ ನದಿ, ಸೂಗೂರಿನ ಶ್ರೀ ಲಕ್ಷ್ಮೀ ವೇಂಕಟೇಶ್ವರ ದೇವಸ್ಥಾನ, ಕೋರವಾರ ಅಣಿ ವೀರಭದ್ರೇಶ್ವರ ದೇಗುಲ, ಮಂಗಲಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಹಸೀಲ್ದಾರ್ ಘಮಾವತಿ ರಾಠೋಡ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ಲೋಕೋಪಯೋಗಿ ಇಲಾಖೆ ಎಇಇ ಸಿದ್ರಾಮ ದಂಡಗುಲಕರ್, ದೇವಸ್ಥಾನದ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಪ್ರಮುಖರಾದ ಜಗನ್ನಾಥ ಚಂದನಕೇರಿ, ಶಿವುಕುಮಾರ ಕಮಲಾಪುರ, ಶಿವುಕುಮಾರ ಕಮಕನೂರ, ಮಂಜುನಾಥ ಮಹಾರುದ್ರ, ನರಸಯ್ಯ ಗುತ್ತೇದಾರ್ ಇತರರಿದ್ದರು.

ನೀರೋ ಎಳೆನೀರೋ !: ಪುರಾಣ ಪ್ರಸಿದ್ಧ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಪ್ರಾಂಗಣದಲ್ಲಿರುವ ಗಡಗಿ ಬಾವಿಯಲ್ಲಿನ ಪುಟಿದೇಳುವ ಬುಗ್ಗಿಗೆ ಭೇಟಿ ನೀಡಿ, ಅಲ್ಲಿನ ಜಲವನ್ನು ಸ್ವೀಕರಿಸಿದರು. ಇದೇನು ನೀರೋ, ಎಳೆನೀರೋ… ಇಷ್ಟೊಂದು ಸಿಹಿಯಾಗಿದೆಯಲ್ಲ. ಬುಗ್ಗಿಯ ಪಾವಿತ್ರ್ಯತೆ ಹಾಳಾಗದಂತೆ ಎಚ್ಚರಿಕೆ ವಹಿಸಿ. ನೀರು ಕಲುಷಿತವಾಗದಂತೆ ನೋಡಿಕೊಳ್ಳಿ ಎಂದು ದೇವಸ್ಥಾನದ ಪ್ರಮುಖರಿಗೆ ಡಿಸಿ ಫೌಜಿಯಾ ಸೂಚನೆ ನೀಡಿದರು.

ವಿಷ್ಣು ತೀರ್ಥದ ಅಂದಕ್ಕೆ ಮನಸೋತ್ರು: ಕಾಳಗಿಯನ್ನು ದೇಗುಲಗಳ ನಾಡೆಂದೆ ಕರೆಯುತ್ತಾರೆ. ಚಾಲುಕ್ಯರ ಆಳ್ವಿಕೆಯಲ್ಲಿ ಸಾಕಷ್ಟು ದೇಗುಲಗಳನ್ನು ನಿರ್ಮಿಸಿದ್ದು, ಇಲ್ಲಿನ ಶಿಲ್ಪಕಲೆಗಳಿಗೆ ಎಲ್ಲರೂ ಮನಸೋಲುವುದು ಸಹಜ. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ವಿಷ್ಣು ತೀರ್ಥದ ಅಂದಕ್ಕೆ ಫಿದಾ ಆದರು. ಸುತ್ತಲೂ ನೀರಿದ್ದು, ಮಧ್ಯದಲ್ಲಿ ದೇಗುಲವಿದೆ. ಪುಟ್ಟ ಸೇತುವೆ ಮೂಲಕ ದೇವಸ್ಥಾನಕ್ಕೆ ಹೋಗಿ, ದರ್ಶನ ಪಡೆದರು. ಅಲ್ಲದೆ ದೇಗುಲದ ಕೆತ್ತನೆಗೆ ಮನಸೋತರು.

ಸುವರ್ಣಗಿರಿಗೆ ರಸ್ತೆ ನಿರ್ಮಾಣ: ಸೂಗೂರ (ಕೆ) ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಡಿಸಿ ತರನ್ನುಮ್ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ವಿಸ್ಮಯಕಾರಿ ಭತ್ತ ಬೆಳೆಯುವ ಸುವರ್ಣಗಿರಿ ಬೆಟ್ಟಕ್ಕೆ ಭೇಟಿ ನೀಡಿ, ಬೆಳೆಯನ್ನು ಕಂಡು ದಿಗ್ಭ್ರಮೆಗೊಂಡರು. ಯಾವುದೇ ಆರೈಕೆಯಿಲ್ಲದೆ ಇಷ್ಟೊಂದು ಸಮೃದ್ಧವಾಗಿ ಬೆಳೆ ಬೆಳೆದಿರುವುದು ಪವಾಡವೇ ಸರಿ. ಇಂಹತ ಪುಣ್ಯ ಕ್ಷೇತ್ರದಲ್ಲಿ ಬದುಕುವ ನೀವೆಲ್ಲರೂ ಪುಣ್ಯವಂತರು. ಮುಂಬರುವ ದಿನಗಳಲ್ಲಿ ಸುವರ್ಣ ಗಿರಿ ಬೆಟ್ಟಕ್ಕೆ ಸುಂದರ ರಸ್ತೆ ನಿರ್ಮಾಣ ಮಾಡಲಾಗುವುದು. ಇಂತಹ ಕ್ಷೇತ್ರದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕಿದೆ, ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು ಎಂದು ಡಿಸಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net