

ವಿಜಯಪುರ: ಅಪಘಾತ ತಡೆಯುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ರಸ್ತೆ ಸುರಕ್ಷತಾ ಪರಿಕ್ರಮ ಹಾಗೂ ಅಪಘಾತ ತಡೆಗೆ ಕೈಗೊಳ್ಳಬೇಕಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಹಾಗೂ ರಸ್ತೆ ಸುರಕ್ಷತಾ ನಿಯಮಗಳು ಪಾಲನೆಯಾಗುವಂತೆ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆ ಅಪಘಾತ ತಡೆಯುವುದರ ಮೂಲಕ ಸುಗಮ ಸಂಚಾರ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಬಹುದಾದ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ರಸ್ತೆ ಅಗಲೀಕರಣ, ರಸ್ತೆ ಸುಧಾರಣೆ, ಅವಶ್ಯವಿರುವಲ್ಲಿ ಅಗತ್ಯ ಮಾಹಿತಿ ಫಲಕ, ಸೈನ್ ಬೋರ್ಡ್, ಸೋಲಾರ್ ಬ್ಲಿಂಕರ್ಸ್ ಹಾಗೂ ಸರ್ವಿಸ್ ರಸ್ತೆಯಲ್ಲಿ ಬ್ಯಾರಿಕ್ಯಾಡ್ ಅಳವಡಿಕೆ, ರಸ್ತೆಗಳ ಮೇಲೆ ಅನಧಿಕೃತ ಪಾರ್ಕಿಂಗ್ ಮಾಡದಂತೆ ನಿಗಾವಹಿಸಬೇಕು. ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲನೆಯಾಗುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಸೂಚಿಸಿದ ಅವರು, ಕೆಲವು ಕಡೆ ಅಂಗಡಿಕಾರರು ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ಅಂಗಡಿ ಮುಂಭಾಗದಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇಂತಹ ಒತ್ತುವರಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಅವಶ್ಯಕತೆಯಿರುವಲ್ಲಿ ಸಿಸಿಟಿವಿ ಹಾಗೂ ವಿವಿಧೆೆಡೆ ಇರುವ ವೃತ್ತಗಳಲ್ಲಿ ಸೂಚನಾ ಫಲಕ ಹಾಗೂ ರಸ್ತೆ ಮಾರ್ಗ ಸೂಚಿಗಳನ್ನು ಅಳವಡಿಸಬೇಕು. ಜನದಟ್ಟಣೆ ಹಾಗೂ ಅಪಘಾತಕ್ಕೆ ಕಾರಣವಾಗುವ ಸಂಭವ ಇರುವ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಅನುವುಗೊಳಿಸಬೇಕು ಎಂದು ಸೂಚನೆ ನೀಡಿದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಜಿಲ್ಲೆಯ ಕೋಲ್ಹಾರ ಸೇತುವೆ ಮೇಲೆ ಬೀದಿ ದೀಪಗಳನ್ನು ಈಗಾಗಲೇ ಅಳವಡಿಸಲು ಕ್ರಮ ವಹಿಸಲಾಗಿದ್ದು, ಸೇತುವೆಗಳ ಮೇಲೆ ಸಂಚರಿಸುವ ವಾಹನಗಳ ನಂಬರ್ ಎದ್ದು ಕಾಣುವ ಹಾಗೂ ರಾತ್ರಿ ವ್ಹಿಜನ್ ಇರುವ ಗುಣಮಟ್ಟದ ಸಿಸಿಟಿವಿ ಅಳವಡಿಸಲು ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟೋಲ್‌ಗಳಲ್ಲಿ ದ್ವಿಚಕ್ರ ವಾಹನ ಸಂಚರಿಸುವ ಮಾರ್ಗಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿ ನಿಗಾವಹಿಸಬೇಕು. ರಸ್ತೆಯ ತಿರುವುಗಳಲ್ಲಿ ಅಗತ್ಯ ಮಾಹಿತಿ ಹಾಗೂ ಸೂಚನಾ ಫಲಕ ಅಳವಡಿಸಿಕೊಂಡು ರಸ್ತೆ ಅಪಘಾತ ತಡೆಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಕೈಕೊಂಡಿರುವ ಕ್ರಮಗಳ ಕುರಿತು ಹಾಗೂ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಸಂಬಂಧಿಸಿ ಅಧಿಕಾರಿಗಳಿಗೆ ಪಿಪಿಟಿ ಮೂಲಕ ಸಮಗ್ರ ಮಾಹಿತಿ ನೀಡಿ ಅಗತ್ಯ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ಎಎಸ್‌ಪಿ ಶಂಕರ ಮಾರಿಹಾಳ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪ ವಿಭಾಗಾಧಿಕಾರಿ ಅನುರಾಧ ವಸ್ತ್ರದ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಿಂ ಬಾಬಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಪೀಟರ್ ಅಲೆಕ್ಸಾಂಡರ್ ಮತ್ತಿತರರಿದ್ದರು.