

ಕೊಪ್ಪಳ: ಸ್ವಾತಂತ್ರ್ಯೋತ್ಸವ ದಿನಾಚರಣೆ ಅಚ್ಚುಕಟ್ಟಾಗಿ ಆಚರಿಸಲು ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿ ಮಾತನಾಡಿದರು.
ಆ.15ರ ಬೆಳಗ್ಗೆ 8 ಗಂಟೆಗೆ ಜಿಲ್ಲಾಡಳಿತ ಭವನದ ಆವರಣ ಹಾಗೂ ಬೆಳಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಯಲಿದೆ. ಕಾರ್ಯಕ್ರಮ ಆಯೋಜನೆಗೆ ರಚಿಸಿದ ಸಮಿತಿಗಳಿಗೆ ವಹಿಸಿದ ಕೆಲಸಗಳನ್ನು ಸರಿಯಾಗಿ ನಿರ್ವಹಿಸಬೇಕೆಂದರು.
ನಿಯಮ ಉಲ್ಲಂಘನೆಯಾಗದಂತೆ ಹಾಗೂ ಸರ್ಕಾರದ ಶಿಷ್ಠಾಚಾರ ಪಾಲನೆಯೊಂದಿಗೆ ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಸಬೇಕು. ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳು, ವೃತ್ತಗಳ ಸ್ವಚ್ಛತೆ ಹಾಗೂ ಅಲಂಕಾರಗೊಳಿಸಿ. ಕ್ರೀಡಾಂಗಣದಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಿ. ಸ್ವಾತಂತ್ರ್ಯ ಯೋಧರು ಕಾರ್ಯಕ್ರಮದಲ್ಲಿ ಪಾಲ್ಗೊಂಡಲ್ಲಿ ಅವರಿಗೆ ಸನ್ಮಾನ ಮಾಡಲು ತಯಾರಿ ಮಾಡಿಕೊಳ್ಳಿ. ಜಿಲ್ಲಾ ಉಸ್ತುವಾರಿ ಸಚಿವರ ಭಾಷಣಕ್ಕೆ ಎಲ್ಲ ಇಲಾಖೆಗಳು ಪ್ರಗತಿ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಪಥಸಂಚಲನಕ್ಕೆ ತರಬೇತಿ ನಡೆಸಿ. ಕ್ರೀಡಾಂಗಣಕ್ಕೆ ಆಗಮಿಸುವ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡಿ. ಹಾಲು ಅಥವಾ ಲಘು ಆಹಾರ ನೀಡುವಂತೆ ನಿರ್ದೇಶಿಸಿದರು.
ಎಸ್ಪಿ ಯಶೋದಾ ವಂಟಗೋಡಿ ಮಾತನಾಡಿ, ಕ್ರೀಡಾಂಗಣದಲ್ಲಿ ತುರ್ತು ಆರೋಗ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಿ. ಆಂಬುಲೆನ್ಸ್, ಅಗ್ನಿಶಾಮಕ ವಾಹನ ಕಾಯ್ದಿರಿಸಿ. ಪ್ಲಾಸ್ಟಿಕ್ ಧ್ವಜ ನಿಷೇಧಿಸಿದ್ದು, ಅಂಗಡಿಗಳಲ್ಲಿ ಮಾರಾಟವಾಗದಂತೆ ನಗರಸಭೆ, ಸ್ಥಳೀಯ ಸಂಸ್ಥೆ ಅಧಿಕಾರಿಗಳು ಎಚ್ಚರ ವಹಿಸುವಂತೆ ತಾಕೀತು ಮಾಡಿದರು. ಡಿವೈಎಸ್ಪಿ ಶರಣಪ್ಪ ಸುಬೇದಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
===ಕೋಟ್===
ತಾಲೂಕು ಮಟ್ಟದಲ್ಲಿ ಧ್ವಜ ಸಂಹಿತೆ ಪಾಲಿಸಿ. ವ್ಯವಸ್ಥಿತ ಧ್ವಜಾರೋಹಣ ನೆರವೇರಿಸುವಂತೆ ಆಯಾ ತಹಸೀಲ್ದಾರರು ಕ್ರಮ ಕೈಗೊಳ್ಳಿ. ಪಥಸಂಚಲನದಲ್ಲಿ ಹೆಚ್ಚು ತಂಡಗಳು ಪಾಲ್ಗೊಳ್ಳುವಂತಿಲ್ಲ. ಶಾಲಾ ಮ್ಕಕಳಿಂದ ಸಾಮೂಹಿಕ ನೃತ್ಯ, ಸಾಧಕರಿಗೆ ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳು ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿ.
ಸಾವಿತ್ರಿ ಕಡಿ, ಎಡಿಸಿ, ಕೊಪ್ಪಳ