ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ

25 manju 7A-web
ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿಯೇ ಎತ್ತುಗಳ ಸಮೇತ ಪ್ರತಿಭಟನೆ ನಡೆಸುತ್ತಿರುವ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಮಹಾದೇವಪ್ಪ ಗಾಣಗಿ, ಗೌರವ್ವ ಮಹದಾವೇಪ್ಪ ಗಾಣಗಿ, ಸತ್ತೆಪ್ಪ ಗಾಣಗಿ ಹಾಗೂ ರವಿ ಗಾಣಗಿ.
Published on

ಬೆಳಗಾವಿ: ಹೆಂಡತಿ ತವರು ಮನೆಯವರ ಸುಳ್ಳು ಆರೋಪ ನಂಬಿದ ಪೊಲೀಸರು ನಮ್ಮನ್ನು ಮನೆಯಿಂದಲೇ ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಗಾಣಗಿ ಕುಟುಂಬ ಸದಸ್ಯರು ಎತ್ತುಗಳ ಸಮೇತ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಾನು ಎರಡನೇ ಮದುವೆಯಾಗಿದ್ದಾಗಿ ಮೊದಲ ಪತ್ನಿ ಸುಳ್ಳು ಆರೋಪ ಮಾಡಿದ್ದಾಳೆ. ಇದನ್ನು ನಂಬಿದ ಕಟಕೋಳ ಠಾಣೆ ಪೋಲೀಸರು ಮನೆಯ ಬಾಗಿಲು ಮುರಿದು ನಮ್ಮನ್ನು ಹೊರಹಾಕಿದ್ದಾರೆ. ಗ್ರಾಮವೊಂದರ ಗುಡಿಸಲಿನಲ್ಲಿದ್ದ ನಮಗೆ ಪೊಲೀಸರು, ಪತ್ನಿ ಮನೆಯ ಸಂಬಂಧಿಗಳು ಕಿರುಕುಳ ನೀಡುತ್ತಿದ್ದಾರೆ. ಊರಲ್ಲಿ ಮನೆ, 18 ಎಕರೆ ಜಮೀನು ಸೇರಿ ಎಲ್ಲವೂ ಇದೆ. ಆದರೆ, ಬದುಕು ಸಾಗಿಸಲು ಬಿಡುತ್ತಿಲ್ಲ. ಹಾಗಾಗಿ ನ್ಯಾಯ ಕೇಳಿ ನಾವು ಊರು ಬಿಟ್ಟು ಎತ್ತುಗಳ ಸಮೇತವಾಗಿ ಇಲ್ಲಿಗೆ ಬಂದಿದ್ದೇವೆ ಎಂದು ರವಿ ಮಹಾದೇವಪ್ಪ ಗಾಣಗಿ ಅಳಲು ತೋಡಿಕೊಂಡರು.

2 ವರ್ಷಗಳಿಂದ ಗ್ರಾಮದಲ್ಲಿ ಕಿರುಕುಳ ಅನುಭವಿಸುತ್ತಿದ್ದೇವೆ. ಆದರೆ, ನ್ಯಾಯ ಸಿಗುತ್ತಿಲ್ಲ. ಈ ಸಂಬಂಧ ಕಟಕೋಳ ಠಾಣೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ. ನ್ಯಾಯ ಸಿಗುವವರೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಠಿಕಾಣಿ ಹೂಡಲು ಬಂದಿದ್ದೇವೆ. ಆದರೆ, ಮೂರು ದಿನಗಳ ಕಾಲ ಸರ್ಕಾರಿ ರಜೆಯಿರುವ ಹಿನ್ನೆಲೆಯಲ್ಲಿ ಪೊಲೀಸರು ಧರಣಿ ಕುಳಿತುಕೊಳ್ಳಲು ಅವಕಾಶ ನೀಡುತ್ತಿಲ್ಲ. ಹಾಗಾಗಿ ಊರಿಗೆ ವಾಪಸ್ ಹೋಗಿ ಸೋಮವಾರ ವಾಪಸ್ ಬರುತ್ತೇವೆ ಎಂದು ಗಾಣಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net