

ಯಾದಗಿರಿ: ಕರೊನಾ ವೈರಸ್ ತಡೆಗೆ ಜಿಲ್ಲಾದ್ಯಂತ ನಡೆಯುವ ಸಂತೆ, ಜಾತ್ರೆ ಮತ್ತು ಸಭೆ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೊನಾ ವೈರಸ್ ಜಾಗೃತಿಗಾಗಿ ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲೆಯಾದ್ಯಂತ ನಡೆಯುವ ಸಂತೆ, ಜಾತ್ರೆ ಹಾಗೂ ಉರುಸ್ಗಳ ಪಟ್ಟಿ ಮಾಡಿ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೇಳಿದರು.
ಜಿಲ್ಲೆಯ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ 14ರಿಂದ 31ರವರೆಗೆ ಸಾರ್ವಜನಿಕರು ಅನುಸರಣ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ತಹಸೀಲ್ದಾರ್ರರು, ನಗರಸಭೆ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿವರ್ಾಹಕ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯೊಂದಿಗೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲಾಡಳಿತದ ಮನವಿಗೆ ಸ್ಪಂದಿಸದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ಸೂಚಿಸಿದರು.
ಕಲ್ಯಾಣ ಮಂಟಪ ಪಟ್ಟಿ ಮಾಡಿ: ಮದುವೆಯಂತಹ ವೈಯಕ್ತಿಕ ಸಭೆ-ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನ ಸೇರಬಾರದು. ಮದುವೆ ಸಮಾರಂಭಗಳನ್ನು ಆದಷ್ಟು ಮಟ್ಟಿಗೆ ಮುಂದೂಡಿದರೆ ಒಳ್ಳೆಯದು. ಕಲ್ಯಾಣ ಮಂಟಪಗಳನ್ನು ಪಟ್ಟಿ ಮಾಡಿ, ಅವುಗಳ ಮಾಲೀಕರಿಗೆ ಸೂಚನೆ ಕೊಡಬೇಕು. ಇನ್ನು ನಾಟಕಗಳು, ಉತ್ಸವಗಳು, ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು, ವಿವಿಧ ರೀತಿಯ ಪಂದ್ಯಾವಳಿಗಳನ್ನು ಕೂಡ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸಲಾಗಿದೆ. ಅದರಂತೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ನೋಂದಣಿ ಕೂಡ ರದ್ದುಪಡಿಸಲಾಗಿದೆ.