

ಯಾದಗಿರಿ: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪತ್ತೆಯಾದ ಬಹುತೇಕ ಪ್ರಕರಣಗಳು ಮಹಾರಾಷ್ಟ್ರದ ಮುಂಬೈ ನಗರದಿಂದ ವಲಸೆ ಬಂದವರಿಂದಲೇ ಆಗಿವೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.
72 ಜನ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರ ರಾಜ್ಯದಿಂದ ಯಾದಗಿರಿ ಜಿಲ್ಲೆಗೆ ಆಗಮಿಸಿದವರು. ಇವರೆಲ್ಲರನ್ನೂ ನಿಗದಿತ ಯಾದಗಿರಿಯ ಕೋವಿಡ್ ಆಸ್ಪತ್ರೆಯಲ್ಲಿ ಅವಲೋಕನೆಗಾಗಿ ಇರಿಸಲಾಗಿದೆ. ಕೋವಿಡ್-19 ತಡೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಿದಲ್ಲಿ ಪಾಸಿಟಿವ್ ವ್ಯಕ್ತಿಗಳಿಗೆ ಶೀಘ್ರ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮಾದರಿ ಸಂಗ್ರಹಿಸಲು 20 ತಂಡಗಳನ್ನು ರಚಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಜಿಲ್ಲೆಯ ಕರೊನಾ ಪಾಸಿಟಿವ್ ವ್ಯಕ್ತಿಗಳನ್ನು ಮುದ್ನಾಳ ಸಮೀಪದ ನೂತನ ಜಿಲ್ಲಾಸ್ಪತ್ರೆ (ಕೋವಿಡ್-19 ಆಸ್ಪತ್ರೆ)ಯಲ್ಲಿ ಅವಲೋಕನೆಗಾಗಿ ಇರಿಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ 150 ಬೆಡ್ಗಳ ವ್ಯವಸ್ಥೆ ಇದ್ದು, ಈ ಪೈಕಿ 32 ಬೆಡ್ಗಳಿಗೆ ಹೈಫ್ರೋ ಆಕ್ಸಿಜನ್ ವ್ಯವಸ್ಥೆ ಇದೆ. ಇನ್ನೂ 100 ಬೆಡ್ಗಳಿಗೆ ಹೈಫ್ರೋ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ, ಹೆಚ್ಚಿನ ಬೆಡ್ಗಳ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗಿದೆ. ಇನ್ನು ಕೋವಿಡ್-19 ಸೌಮ್ಯ ಮತ್ತು ಅತೀ ಸೌಮ್ಯ ಪ್ರಕರಣಗಳಿಗಾಗಿ ಭೀಮರಾಯನಗುಡಿಯಲ್ಲಿ 250 ಬೆಡ್, ಬಂದಳ್ಳಿ ಏಕಲವ್ಯ ಶಾಲೆಯಲ್ಲಿ 200 ಬೆಡ್, ಸುರಪುರ ನಿಷ್ಠಿ ಕಾಲೇಜಿನಲ್ಲಿ ಕೂಡ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ, ಸಾರ್ವಜನಿಕರಲ್ಲಿ ಆತಂಕ ಅಥವಾ ಭಯ ಬೇಡ ಎಂದು ಅವರು ತಿಳಿಸಿದರು.ಜಿಪಂ ಸಿಇಒ ಶಿಲ್ಪಾ ಶಮರ್ಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಇದ್ದರು.