

ಯಾದಗಿರಿ: ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹಬ್ಬ ಜಿಲ್ಲೆಯ ಜನತೆ ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಂಭಾಂಗಣದಲ್ಲಿ ಬುಧವಾರ ಸಂಜೆ ಹೋಳಿ ಹಬ್ಬ ಆಚರಣೆ ನಿಮಿತ್ತ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್ 9 ಹಾಗೂ 10ರಂದು ಜಿಲ್ಲೆಯಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ರಾಸಾಯನಿಕ ಬಣ್ಣಗಳನ್ನು ಬಳಸಬಾರದು ಜತೆಗೆ ಕರೊನಾ ವೈರಸ್ ಭೀತಿ ಇರುವುದರಿಂದ ಹಬ್ಬದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಮಾರ್ಚ್ 9ರಂದು ಕಾಮದಹನ ಮಾಡಲಾಗುವುದು, 10ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಮಾತ್ರ ಬಣ್ಣ ಆಡಲು ಅವಕಾಶವಿರುತ್ತದೆ. ಪಿಯುಸಿ ಪರೀಕ್ಷೆ ನಡೆದಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಪರಿಸರಸ್ನೇಹಿ ಬಣ್ಣ ಬಳಸಬೇಕು ಎಂದು ಸೂಚಿಸಿದರು.
ಕಾಮದಹನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸೂಚಿಸಿದ ಅವರು, ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಮುಖಂಡರಾದ ಅಯ್ಯಣ್ಣ ಹುಂಡೇಕಾರ್, ಲಾಯಕ್ ಹುಸೇನ್ ಬಾದಲ್, ಗುಲಾಮ್ ಸಮುದಾನಿ, ವಾಹೀದ್ಮೀಯಾ, ಕಸಾಪ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ, ವಿಶ್ವನಾಥ ಸಿರವಾರ, ಬಾಬು ದೋಖಾ, ಮರೆಪ್ಪ ಚಟ್ಟೇರಕರ್ ಇತರರು ಇದ್ದರು