ಅರ್ಜಿ ಸಲ್ಲಿಸಿದವರಿಗೆ ಆಹಾರಧಾನ್ಯ ವಿತರಣೆ

dc kurmarao 1
Published on

ಯಾದಗಿರಿ: ಈಗಾಗಲೇ ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಜಿಲ್ಲೆಯ ನಾಗರಿಕರಿಗೆ ಆಹಾರ ಧಾನ್ಯ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿ ಕೋರಿ ಸಲ್ಲಿಸಿರುವ 4934 ಅರ್ಜಿ ಹಾಗೂ ಆದ್ಯತೇತರ ಕುಟುಂಬ (ಎಪಿಎಲ್) ಪಡಿತರ ಚೀಟಿ ಕೋರಿ ಸಲ್ಲಿಸಿರುವ 146 ಅರ್ಜಿ ವಿಲೇವಾರಿಗೆ ಬಾಕಿ ಉಳಿದಿವೆ. ಕರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಿರುವುದರಿಂದ ಏ. 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹೊಸ ಪಡಿತರ ಚೀಟಿಗಾಗಿ ಅಜರ್ಿ ಸಲ್ಲಿಸಿರುವ ಕುಟುಂಬಗಳಿಗೆ ತಾತ್ಕಾಲಿಕವಾಗಿ ಆಹಾರಧಾನ್ಯ ವಿತರಿಸಲು ಸರ್ಕಾರ ಆದೇಶ ಹೊರಡಿಸಿರುತ್ತದೆ.

ಅರ್ಜಿದಾರರು ಆನ್ಲೈನ್ನಲ್ಲಿ ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಗೆ ಒದಗಿಸಬೇಕು. ನಂತರ ಅರ್ಜಿದಾರರ ಆಧಾರ್ ಸಂಖ್ಯೆ ಮತ್ತು ಸಂಬಂಧಿಸಿದ ದಾಖಲೆ ಪ್ರತಿಯನ್ನು ನ್ಯಾಯಬೆಲೆ ಅಂಗಡಿಗೆ ನೀಡಬೇಕು. ನ್ಯಾಯಬೆಲೆ ಅಂಗಡಿ ವರ್ತಕರು ಆಧಾರ್ ಸಂಖ್ಯೆಯನ್ನು ಇಲಾಖೆಯ ದತ್ತಾಂಶದಲ್ಲಿ ನಮೂದಿಸಿ ಸದರಿ ಆಧಾರ್ ಸಂಖ್ಯೆಗೆ ಈಗಾಗಲೇ ಪಡಿತರ ಚೀಟಿ ವಿತರಿಸಲಾಗಿದೆಯೇ ಅಥವಾ ಆಧಾರ್ ಸಂಖ್ಯೆ ಬೇರೆ ಇನ್ಯಾವುದಾದರೂ ಚಾಲ್ತಿ ಪಡಿತರ ಚೀಟಿಯಲ್ಲಿ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. ದತ್ತಾಂಶದಲ್ಲಿ ಆಧಾರ್ ಸಂಖ್ಯೆಗೆ ಯಾವುದೇ ಪಡಿತರ ಚೀಟಿ ವಿತರಣೆಯಾಗದೇ ಇದ್ದಲ್ಲಿ ಅಥವಾ ಚಾಲ್ತಿ ಪಡಿತರ ಚೀಟಿಯಲ್ಲಿ ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಅಂತಹ ಅರ್ಜಿದಾರರಿಗೆ ಪಡಿತರ ಅಕ್ಕಿ ವಿತರಿಸಲಾಗುವುದು ಎಂದಿದ್ದಾರೆ.

ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿದಾರರಿಗೆ ಪ್ರತಿ ಮಾಹೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ವಿತರಿಸಲಾಗುವುದು. ಆದ್ಯತೇತರ (ಎಪಿಎಲ್) ಪಡಿತರ ಚೀಟಿಗಾಗಿ ಅರ್ಜಿ ಸಲಿಸಿದ್ದಲ್ಲಿ ಎಪಿಎಲ್ ದರದಲ್ಲಿ ಪಡಿತರ ಖರೀದಿಸಲು ಸಮ್ಮತಿ ಸೂಚಿಸಿರುವ ಅರ್ಜಿಗಳಿಗೆ ಸಹಾಯ ಧನಯುಕ್ತ ದರ ಪ್ರತಿ ಕೆಜಿಗೆ ರೂ. 15ರಂತೆ ಪ್ರತಿ ಅರ್ಜಿದಾರರಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲಾಗುವುದು. ಪಡಿತರ ಪಡೆಯುವ ಅರ್ಜಿದಾರರಿಂದ ಆಧಾರ್ ದೃಢೀಕೃತ ಓಟಿಪಿ ಅನ್ನು ಪಡೆದು ಪಡಿತರವನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಭಾರತ ಆಹಾರ ನಿಗಮ (ಎಫ್ಸಿಐ) ದಿಂದ ಒಎಂಎಸ್ಎಸ್ (ಡಿ) ದರದಲ್ಲಿ ಗೋಧಿ ಮತ್ತು ಅಕ್ಕಿ ಖರೀದಿಸಲು ಅವಕಾಶವಿದೆ. ಆಸಕ್ತಿಯುಳ್ಳ ಬೃಹತ್ ಬಳಕೆದಾರರು ಗೋಧಿ ಮತ್ತು ಅಕ್ಕಿ ಪ್ರಮಾಣದ ಕುರಿತು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಬಹುದು. ಖರೀದಿದಾರರು ಮತ್ತು ಜಿಲ್ಲೆಯ ಸಂಘ- ಸಂಸ್ಥೆ (ಎನ್ಜಿಒ)ಗಳು ಅವಶ್ಯಕತೆಯೊಂದಿಗೆ ಜಿಲ್ಲಾಧಿಕಾರಿಗಳಲ್ಲಿ ಅಥವಾ ಜಿಲ್ಲೆಯ ಆಹಾರ ಇಲಾಖೆಗೆ ಸಲ್ಲಿಸಿದಲ್ಲಿ, ಜಿಲ್ಲಾಧಿಕಾರಿಗಳು ಈ ಬಗ್ಗೆ ಭಾರತ ಆಹಾರ ನಿಗಮ (ಎಫ್ಸಿಐ)ಕ್ಕೆ ಬೇಡಿಕೆ ಸಲ್ಲಿಸುತ್ತಾರೆ.

ರಾಜ್ಯ ಸರ್ಕಾರದ ಮೂಲಕ ಖರೀದಿದಾರರು ಖರೀದಿಸಬಹುದಾದ ಕನಿಷ್ಠ ಪ್ರಮಾಣ ವಾರಕ್ಕೆ 10 ಕ್ವಿಂಟಲ್ಗಳು ಮತ್ತು ಗರಿಷ್ಠ ಪ್ರಮಾಣ ಯಾವುದೇ ಮಿತಿ ಇರುವುದಿಲ್ಲ. ಈ ಯೋಜನೆಯಲ್ಲಿ ಅಕ್ಕಿ ಪ್ರತಿ ಕೆಜಿಗೆ 22 ರೂ. ಮತ್ತು ಗೋಧಿ ಪ್ರತಿ ಕೆಜಿಗೆ 21 ರೂ. ನಂತೆ ಸಹಾಯಧನ ದರದಲ್ಲಿ ಬೃಹತ್ ಬಳಕೆದಾರರು, ಖರೀದಿದಾರರು ಮತ್ತು ಜಿಲ್ಲೆಯ ಸಂಘ- ಸಂಸ್ಥೆ (ಎನ್ಜಿಒ) ಗಳು ಈ ಯೋಜನೆಯ ಲಾಭ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net