ಶಿಕಾರಿಪುರದಲ್ಲಿ 6 ಮರಳು ನಿಕ್ಷೇಪ ಗುರುತು

dc Shivakumar
Published on

ಶಿವಮೊಗ್ಗ: ಹೊಸ ಮರಳು ನೀತಿ-2020ರ ಅನ್ವಯ ಮೊದಲ, ಎರಡನೇ ಹಾಗೂ ಮೂರನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳು ನಿಕ್ಷೇಪಗಳನ್ನು ಗುರುತಿಸಿ ನಿಯಮಾನುಸಾರ ವಿಲೇವಾರಿ ಮಾಡಲು ಸೂಚಿಸಲಾಗಿತ್ತು. ಹೊಸ ಮರಳು ನೀತಿ ಪ್ರಕಾರ ಶಿಕಾರಿಪುರ ತಾಲೂಕಿನ 6 ಸ್ಥಳಗಳಲ್ಲಿ ಮರಳು ನಿಕ್ಷೇಪ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

ಸೋಮವಾರ ಜಿಲ್ಲಾ ಮಟ್ಟದ ಮರಳು ಟಾಸ್ಕ್​ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಶಿಕಾರಿಪುರದಲ್ಲಿ ಗುರುತಿಸಿರುವ ನಿಕ್ಷೇಪಗಳಿಂದ ಮರಳನ್ನು ವಿಲೇವಾರಿ ಮಾಡಲು ಸ್ಥಳೀಯ ಸಮಿತಿ ಅನುಮತಿ ನೀಡಿದೆ. ಅನುಮೋದನೆಗಾಗಿ ಜಿಲ್ಲಾ ಸಮಿತಿಗೆ ರವಾನಿಸಲಾಗಿದೆ. ಉಳಿದ ತಾಲೂಕುಗಳಲ್ಲೂ ಮರಳು ನಿಕ್ಷೇಪಗಳನ್ನು ಗುರುತಿಸಿ ನಿಯಮಾನುಸಾರ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರರಿಗೆ ಸೂಚಿಸಿದರು.

ಹೊಸ ಮರಳು ನೀತಿ ಅನ್ವಯ ತೀರ್ಥಹಳ್ಳಿ ತಾಲೂಕು ಲಿಂಗಾಪುರ ಗ್ರಾಮದ ವ್ಯಾಪ್ತಿಯ ತುಂಗಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ 30 ಎಕರೆ ವಿಸ್ತೀರ್ಣದಲ್ಲಿ ಮರಳು ಗಣಿಗಾರಿಕೆಗೆ ಬದಲಾಗಿ ಶೇಖರಣೆಗೊಂಡಿರುವ ಹೂಳಿನಲ್ಲಿ ದೊರೆಯುವ ಮರಳು ತೆಗೆದು ವಿಲೇವಾರಿ ಮಾಡಬೇಕು ಎಂದರು.

ಹೊಸ ಮರಳು ನೀತಿ ಅನುಷ್ಠಾನಕ್ಕೂ ಪೂರ್ವದಲ್ಲಿ ಮೊದಲ, ದ್ವಿತೀಯ ಹಾಗೂ ತೃತೀಯ ಹಂತದ ಹರಾಜು ಪ್ರಕ್ರಿಯೆಯಲ್ಲಿ ಯಶಸ್ವಿಯಾಗದ ಮರಳು ಬ್ಲಾಕ್​ಗಳನ್ನು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾಪೋರೇಷನ್​ಗೆ ಹಸ್ತಾಂತರಿಸುವಂತೆ ಡಿಸಿ ಸೂಚಿಸಿದರು.

ಎಸ್ಪಿ ಕೆ.ಎಂ.ಶಾಂತರಾಜು, ಎಸಿಗಳಾದ ಟಿ.ವಿ.ಪ್ರಕಾಶ್, ಪ್ರಸನ್ನಕುಮಾರ್, ಎಲ್ಲ ತಾಲೂಕಿನ ತಹಸೀಲ್ದಾರರು, ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net