

ಬಾಗಲಕೋಟೆ: ಜಿಲ್ಲೆಯ ಬಾದಾಮಿ ಹಾಗೂ ಬಾಗಲಕೋಟೆ ತಾಲೂಕು ವ್ಯಾಪ್ತಿಯ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಮನೆ ಮನೆ ಸರ್ವೇ ಕಾರ್ಯಗಳ ಸ್ಥಳಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಭೇಟಿ ನೀಡಿ ಪರಿಶೀಲಿಸಿದರು.
ಬಾದಾಮಿಯ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಚುನಾವಣೆ ವಿಭಾಗಕ್ಕೆ ತೆರಳಿ ಮನೆ ಮನೆ ಸರ್ವೇ ಕಾರ್ಯ ಪರಿಶೀಲಿಸಿದರು. ನಂತರ ನಗರದ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಹಾಜರಾತಿ, ಆಹಾರ ವಿತರಣೆ ಕುರಿತು ಮಾಹಿತಿ ಪಡೆದು ಪುರಸಭೆಗೆ ಭೇಟಿ ನೀಡಿದರು. ಬಳಿಕ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ತಾಲೂಕು ಕಟ್ಟಡ ಪರಿಶೀಲಿಸಿದರು.
ನಂತರ ತಾಲೂಕಿನ ಕಟಗೇರಿ, ಕೊಂಕಣಕೊಪ್ಪ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿ, ಶಾಲೆ ಮಕ್ಕಳೊಂದಿಗೆ ಸಂವಾದ ನಡೆಸಿದರು. ಚುನಾವಣೆಗೆ ಸಂಬಂಧಿಸಿದ ಮನೆ ಮನೆ ಸರ್ವೇ ಕಾರ್ಯ ಕುರಿತು ಬಿಎಲ್‌ಒಗಳಿಂದ ಮಾಹಿತಿ ಪಡೆದರಲ್ಲದೆ, ಶಾಲೆ ಶೌಚಗೃಹಗಳನ್ನು ಸೂಸ್ಥಿತಿಯಲ್ಲಿಡಲು ಸೂಚಿಸಿದರು.
ಹಳೇ ಬಾಗಲಕೋಟೆಯ ಸರ್ಕಾರಿ ಶಾಲೆ ಹಾಗೂ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಬಾಗಲಕೋಟೆ ತಹಸೀಲ್ದಾರ ಕಚೇರಿಯ ಚುನಾವಣೆ ವಿಭಾಗಕ್ಕೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆಗೆ ಕೈಗೊಂಡ ಕ್ರಮಗಳ ಮಾಹಿತಿ ಪಡೆದರು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಬಾದಾಮಿ ತಹಸೀಲ್ದಾರ ಜೆ.ಬಿ. ಮಜ್ಜಗಿ, ಬಾಗಲಕೋಟೆ ತಹಸೀಲ್ದಾರ ಅಮರೇಶ ಪಮ್ಮಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಇತರರಿದ್ದರು.