ಪೌರಕಾರ್ಮಿಕರ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿ ಸೂಚನೆ

mysore
Published on

ಮೈಸೂರು: ಜಿಲ್ಲೆಯಲ್ಲಿರುವ ಪೌರಕಾರ್ಮಿಕರಿಗೆ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳನ್ನು ಸಂಪೂರ್ಣವಾಗಿ ದೊರೆಯುವಂತೆ ಮಾಡಬೇಕು. ಜತೆಗೆ ಸಮಸ್ಯೆಗಳನ್ನು ಅಧಿಕಾರಿಗಳ ಮಟ್ಟದಲ್ಲಿ ನಿರ್ವಹಿಸಿ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸೂಚಿಸಿದರು.


ತಮ್ಮ ಕಚೇರಿಯಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ನಿಯಮ- 2013ರ ಕಾಯ್ದೆ ಅಡಿ ಸೋಮವಾರ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ ನಡೆಸಿದರು.


ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಪೌರಕಾರ್ಮಿಕರಿಗೆ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸ್ವಚ್ಛತಾ ಕಾರ್ಮಿಕರಿಗೆ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ತಾಕಿತು ಮಾಡಿದರು.


ಸಫಾಯಿ ಕಾರ್ಮಿಕರ ಸಮುದಾಯಕ್ಕೆ ಮೀಸಲಾಗಿರಿಸಿದ ಹೆಬ್ಬಾಳು ಕಾಲನಿಯ ಸರ್ವೇ ನಂಬರ್ 141ರಲ್ಲಿ 2 ಎಕರೆ ಜಾಗವನ್ನು ಆಶ್ರಯ ಸಮಿತಿಗೆ ಸೇರಿಸಿರುವುದನ್ನು ವಾಪಸ್ ಪಡೆದು ಸಫಾಯಿ ಕರ್ಮಚಾರಿಗಳಿಗೆ ಸಮುದಾಯಕ್ಕೆ ನೀಡುವ ಕುರಿತು, ಸೂರಿಲ್ಲದ ದಲಿತ ಸಫಾಯಿ ಕರ್ಮಚಾರಿಗಳಿಗೆ ಈ ಸ್ಥಳದಲ್ಲಿ ಮನೆ ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.


ತಿ.ನರಸೀಪುರ ತಾಲೂಕಿನಲ್ಲಿ ಮೃತರಾದ ಪೌರಕಾರ್ಮಿಕ ಮುರುಗನ್ ಅವರ ಮಗಳಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡುವ ಕುರಿತು, ನಂಜನಗೂಡು ತಾಲೂಕಿನ ಕಳಲೆ ಗ್ರಾಮ ಪಂಚಾಯಿತಿಯ ಪೌರಕಾರ್ಮಿಕ ರಂಗಾ ಅವರು ತಮ್ಮ 10 ತಿಂಗಳ ಬಾಕಿ ವೇತನ ಕೇಳಲು ಹೋದಾಗ ಜಾತಿ ನಿಂದನೆ ಮಾಡಿ ಅವಮಾನಿಸಿದ್ದರಿಂದ ಪಂಚಾಯಿತಿ ಕಚೇರಿಯಲ್ಲಿ ಮೃತರಾಗಿರುವ ವಿಷಯವೂ ಚರ್ಚೆ ಆಯಿತು. ಹೀಗೆ ವಿವಿಧ ವಿಷಯಗಳ ಸಭೆಯಲ್ಲಿ ಪ್ರಸ್ತಾಪವಾದವು.


ಜಿಲ್ಲಾಧಿಕಾರಿ ಮಾತನಾಡಿ, ವೇತನ, ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಡಾ, ಮೈಸೂರು ಮಹಾನಗರ ಪಾಲಿಕೆ, ಸಂಬಂಧಿತ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಆದೇಶಿಸಲಾಯಿತು. ಮುಂದಿನ ಸಭೆಯ ಒಳಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕಾರ್ಮಿಕರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.


ಮಾನ್ಯುಯಲ್ ಸ್ಕ್ಯಾವೆಂಜರ್ ಸಮಿತಿಯ ರಾಜ್ಯ ಮಟ್ಟದ ಪ್ರತಿನಿಧಿ ರಾಜು ಮಾತನಾಡಿ, ಪೌರಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳು ದೊರೆಯುತ್ತಿಲ್ಲ. ನಿರಾಶ್ರಿತರಿಗೆ ಮನೆ ಸೌಲಭ್ಯ ಇಲ್ಲ ಎಂದು ದೂರಿದರು.


ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್, ಹುಣಸೂರು ಉಪ ವಿಭಾಗಾಧಿಕಾರಿ ರುಚಿ ಜಿಂದಾಲ್, ಸಮಿತಿಯ ಮಂಜುನಾಥ್, ಗುರುದತ್, ಬಿ. ಚೆಲುವರಾಜು, ದೀಪಾ, ಪುಷ್ಪಲತಾ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net