ಮಾವು, ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ಚಾಲನೆ

mau mela
Published on

ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ಮೇ೨೬ ರವರೆಗೆ ನಗರದ ಹಾಪ್ ಕಾಮ್ಸ್ ಆವರಣದಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.

ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ನಗರದ ಅಂಚೆ ಕಚೇರಿಯ ಎದುರು ಇರುವ ಹೈಟೆಕ್ ಮಾರಾಟ ಮಳಿಗೆಯ ಆವರಣದಲ್ಲಿ ಮೇ೨೬ ರವರೆಗೆ ನಡೆಯುವ ಮಾವು ಮತ್ತು ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ತೋಟಗಾರಿಕೆ ಇಲಾಖೆ ಮತ್ತು ಹಾಪ್ ಕಾಮ್ಸ್ ವತಿಯಿಂದ ಈ ಮೇಳ ನಡೆಯುತ್ತಿದೆ. ನಾಲ್ಕು ದಿನಗಳವರೆಗೆ ಏರ್ಪಡಿಸಲಾಗಿದೆ. ಕೊಡಗಿನಲ್ಲಿ ಮಾವಿನ ಮೇಳ ಆಯೋಜಿಸಿರುವುದರಿಂದ ಜನರಿಗೆ ಬೇರೆ ಬೇರೆ ರೀತಿಯ ಮಾವಿನ ಹಣ್ಣುಗಳು ಸಿಗಲು ಸಾಧ್ಯವಾಗುತ್ತದೆ. ಮಾವು ಮತ್ತು ಹಲಸು ಮೇಳದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಜನರು ಪಾಲ್ಗೊಂಡಿರುವುದು ಸಂತೋಷ ತಂದಿದೆ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಯೋಗೇಶ್ ಮಾತನಾಡಿ, ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಮಾವು ಮೇಳದ ಉದ್ದೇಶವಾಗಿದೆ. ಮೇಳದಲ್ಲಿ ವಲಜ, ಇಮಾಮ್ ಫಸಂದ್, ಸಕ್ಕರೆ ಗುತ್ತಿ, ಮಲಗೋವ, ಆಮ್ಲೇಟ್ ಮಾವು, ಬ್ರೂನಿ ಕಿಂಗ್, ಸಿಂಧೂರ, ರಸಪೂರಿ, ತೋತಪುರಿ, ಅಮರಪಾಲಿ, ಮಲ್ಲಿಕ, ದಶೇರಿ, ಕಾಲಾಪಾಡಿ, ವಲಜ, ಕೇಸರ್, ಮಿಠಾಯಿ ಗೋಲಾ, ರುಮಾನಿ, ಬಂಗನ್ ಪಲ್ಲಿ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ನೇರ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ, ನಿರ್ದೇಶಕ ನಾಗೇಶ್ ಕುಂದಲ್ಪಾಡಿ, ಬಿ.ಎ.ಹರೀಶ್, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಎಂ.ಮನೋಹರ್, ಸುವಿನ್ ಗಣಪತಿ, ಉಮೇಶ್‌ರಾಜ ಅರಸ್, ಸುಧೀರ್, ಹಾಪ್‌ಕಾಮ್ಸ್ ಸಿಇಒ ರೇಷ್ಮ ಗಿರೀಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net