121 ಜನರ ಕ್ವಾರಂಟೈನ್ ಅವಧಿ ಪೂರ್ಣ- ಜಿಲ್ಲಾಧಿಕಾರಿ ಬೊಮ್ಮನಹಳ್ಳಿ

DC Belgaum
Published on

ಬೆಳಗಾವಿ: ಕರೊನಾ ವೈರಸ್ ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿ ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್‌ನಲ್ಲಿದ್ದ 121 ಜನರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಬೆಳಗಾವಿಯ ಕ್ವಾರಂ ಟೈನ್ ಕೇಂದ್ರದಲ್ಲಿದ್ದ 87 ಹಾಗೂ ರಾಯಬಾಗ ತಾಲೂಕಿನಲ್ಲಿದ್ದ 34 ಜನರನ್ನು ಮನೆಗೆ ಕಳುಹಿಸಲಾಗಿದೆ. ಈ ಎಲ್ಲರೂ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಇವರೆಲ್ಲ ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಎಲ್ಲ ವರದಿಗಳು ನೆಗೆಟಿವ್ ಬಂದಿರುವುದರಿಂದ ಅವರನ್ನು ಮನೆಗೆ ಕಳಿಸಲಾಗಿದೆ ಎಂದರು.

ಬಿಡುಗಡೆಗೊಂಡವರೆಲ್ಲ ಕಡ್ಡಾಯವಾಗಿ 14 ದಿನಗಳ ವರೆಗೆ ಹೋಂ ಕ್ವಾರಂಟೈನ್ ಮಾರ್ಗಸೂಚಿ ಹಾಗೂ ಅಧಿಕಾರಿಗಳ ನಿರ್ದೇಶನಗಳನ್ನು ತಪ್ಪದೇ ಪಾಲಿಸಬೇಕು. ಮನೆಯಲ್ಲಿ ಇರುವವರ ಮೇಲೆ ಸಾಫ್ಟ್‌ವೇರ್ ಹಾಗೂ ಮೊಬೈಲ್ ಆ್ಯಪ್ ಮೂಲಕ ನಿಗಾ ವಹಿಸಲಾಗುತ್ತದೆ. ಅಲ್ಲದೆ, ಆರೋಗ್ಯ ಇಲಾಖೆಯ ತಂಡಗಳು ಅವರವರ ಮನೆಗಳಿಗೆ ಭೇಟಿ ನೀಡಲಿವೆ ಎಂದರು.

ಆರೋಗ್ಯ, ಕಂದಾಯ ಹಾಗೂ ಪೊಲೀಸ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಯ ಅವಿರತ ಶ್ರಮದಿಂದ ಸೋಂಕಿತರು, ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಗುಣಮುಖರಾಗುತ್ತಿದ್ದಾರೆ ಎಂದು ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net