ಎರಡು ವರ್ಷ ಕಳೆದರೂ ಹಾವುಗೊಲ್ಲರಿಗಿಲ್ಲ ನಿವೇಶನ

3 nrp 1
Published on

ಎನ್.ಆರ್.ಪುರ: ತಾಲೂಕಿನ ಬಾಳೆಕೊಪ್ಪದಲ್ಲಿ ಮುಚ್ಚಿರುವ ಸರ್ಕಾರಿ ಶಾಲೆ ಆವರಣದಲ್ಲಿ ಬೀಡುಬಿಟ್ಟಿರುವ ಹಾವುಗೊಲ್ಲ ಕುಟುಂಬಗಳಿಗೆ ನೀಡಿದ್ದ ನಿವೇಶನ ಭರವಸೆ ಈವರೆಗೂ ಈಡೇರಿಲ್ಲ.

ತಾಲೂಕಿನ ಬಾಳೆ ಗ್ರಾಮದ ಸರ್ವೆ ನಂ. 21ರಲ್ಲಿ ಹಲವು ವರ್ಷಗಳಿಂದ ಹಾವುಗೊಲ್ಲ ಸಮುದಾಯ 28 ಕುಟುಂಬಗಳು ವಾಸವಾಗಿದ್ದವು. ಕುಲಕಸುಬನ್ನು ತೊರೆದು ತೋಟಗಳಲ್ಲಿ, ಬಾಳೆಕಾಯಿ ಲೋಡ್ ಮಾಡುವ ಕೆಲಸ, ಗುಜರಿ ಆಯುವ ಕೆಲಸ ಮಾಡುತ್ತಿದ್ದರು. ಅಷ್ಟರಲ್ಲಿ ಸಮುದಾಯದ ಕೆಲ ಮದ್ಯವ್ಯಸನಿಗಳು ಮೃತಪಟ್ಟರು. ಸಮುದಾಯದ ಕೆಲ ಮಂದಿ ಓರ್ವ ಜ್ಯೋತಿಷಿ ಬಳಿ ಹೋಗಿ ಕೇಳಿದಾಗ, ಆ ಜ್ಯೋತಿಷಿ ಸೂರ್ಯಗ್ರಹಣ ತುಂಬ ಕೆಟ್ಟದು. ನೀವು ಇದ್ದಲ್ಲೇ ವಾಸಿಸಿದರೆ ಸಾವು ಹೆಚ್ಚಾಗುತ್ತದೆ ಎಂದು ಹೇಳಿದ್ದ. ಇದನ್ನೇ ನಂಬಿದ ಅವರು ಗ್ರಾಮವನ್ನು ತೊರೆದಿದ್ದರು.

ಇದನ್ನು ಗಮನಿಸಿದ ತಾಲೂಕು ಆಡಳಿತ ಅವರ ಮನವೊಲಿಸಿ ಕರೆತಂದು ನಿವೇಶನ ಒದಗಿಸುವ ಭರವಸೆ ನೀಡಿತ್ತು. ಅಲ್ಲದೆ ಬಾಳೆಕೊಪ್ಪದ ಸರ್ಕಾರಿ ಶಾಲೆ ಆವರಣದಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಲು ಅವಕಾಶ ಮಾಡಿಕೊಟ್ಟಿತ್ತು. ಎರಡು ವರ್ಷಗಳಿಂದ ಇದೇ ಶಾಲೆ ಆವರಣದಲ್ಲಿ ಮಳೆ, ಬಿಸಿಲನ್ನೂ ಲೆಕ್ಕಿಸದೆ ತಾತ್ಕಾಲಿಕ ಶೆಡ್​ನಲ್ಲಿ ವಾಸವಾಗಿದ್ದಾರೆ.

ತಾಲೂಕಿನ ನಾಗಲಾಪುರ ಗ್ರಾಮದ ಸ.ನಂ.179ರಲ್ಲಿ ನಿವೇಶನ ಗುರುತಿಸಲಾಗಿತ್ತು. ಈ ಜಾಗದಲ್ಲಿ ಬೃಹತ್ ಗಾತ್ರದ ಅಕೇಶಿಯಾ ಮರಗಳಿರುವುದರಿಂದ ಅರಣ್ಯ ಇಲಾಖೆ ಒಪ್ಪಿಗೆ ನೀಡದೆ ಇದ್ದುದರಿಂದ ನಿವೇಶನ ಹೊಂದುವ ಕನಸು ಈಡೇರಲಿಲ್ಲ.

ಇತ್ತೀಚೆಗೆ ಅರಳಿಕೊಪ್ಪ ಗ್ರಾಮದ ಸ.ನಂ.108ರಲ್ಲಿ ಒಂದು ಎಕರೆ ಜಾಗವನ್ನು ಗುರುತಿಸಿ ಜಿಲ್ಲಾಧಿಕಾರಿ ಅನುಮೋದನೆಗಾಗಿ ಕಳುಹಿಸಲಾಗಿತ್ತು. ಈ ಜಾಗವನ್ನು ಆಶ್ರಯ ನಿವೇಶನಕ್ಕೆ ಮೀಸಲಿಡಲಾಗಿದೆ ಎಂದು ತಾಪಂ ಇಒ ಕಚೇರಿ ಹಿಂಬರಹ ನೀಡಿತು. ಇದೇ ಜಾಗವನ್ನು ಹಾವುಗೊಲ್ಲರಿಗೆ ಆಶ್ರಯ ನಿವೇಶನಕ್ಕೆ ಮೀಸಲಿರಿಸಿದ ಜಾಗ ಎಂದು ತಿದ್ದುಪಡಿ ಮಾಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಅನುಮೋದನೆಯಾಗಿ ಬಂದ ಕೂಡಲೇ ನಿವೇಶನ ಹಂಚಿಕೆ ಮಾಡುವ ಭರವಸೆ ಸಿಕ್ಕಿದೆ.

ಈಗಾಗಲೇ ಎರಡು ಕಡೆ ನಿವೇಶನ ಹಂಚಿಕೆಗೆ ಜಾಗ ಗುರುತಿಸಲಾಗುತ್ತಿದೆ. ಹಾವುಗೊಲ್ಲ ಕುಟುಂಬದವರು ಆ ಜಾಗಕ್ಕೆ ಹೋಗುವುದಕ್ಕೆ ಒಪ್ಪುತ್ತಿಲ್ಲ. ಹಾವುಗೊಲ್ಲ ಕುಟುಂಬದವರ ಮನವೊಲಿಸಿ, ಶೀಘ್ರವೇ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ವಿಜಯವಾಣಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net