ಖಾಸಗಿ ಆಸ್ಪತ್ರೆಗಳಿಂದ 'ಆಯುಷ್ಮಾನ್​ ಭಾರತ್​' ಕಡೆಗಣನೆ

BJP-2
Published on

ಕ್ರಮ ಕೈಗೊಳ್ಳದಿದ್ದಲ್ಲಿ ನ.25ಕ್ಕೆ ಪ್ರತಿಭಟನೆ

ಜಿಲ್ಲಾಡಳಿತಕ್ಕೆ ಜಿಲ್ಲಾ ಯುವ ಮೋರ್ಚಾ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲೂ ಸಹ ಬೆಡ್​ ಸಮಸ್ಯೆ ಉಂಟಾಗುತ್ತಿದ್ದು, ಒಂದು ವರ್ಷದಿಂದ ಆಯುಷ್ಮಾನ್​ ಭಾರತ್​ ಯೋಜನೆ ಕಾರ್ಯರೂಪಕ್ಕೆ ತರಲು ತೊಂದರೆಯಾಗುತ್ತಿದೆ. ನ.25ರ ಒಳಗೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ನಡೆಸಲಿದೆ ಎಂದು ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್​ ಶೆಟ್ಟಿ ಎಚ್ಚರಿಕೆ ನೀಡಿದರು.

ಈ ವಿಚಾರವಾಗಿ ಜಿಲ್ಲಾ ಯುವಮೋರ್ಚಾ ಪದಾಧಿಕಾರಿಗಳೊಂದಿಗೆ ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರನ್ನು ಗುರುವಾರ ಭೇಟಿಯಾಗಿ, ವಿಚಾರ ಪ್ರಸ್ತಾಪಿಸಿ ಮನವಿ ಸಲ್ಲಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್​ ಭಾರತ್​ ಯೋಜನೆ ಕಾರ್ಯರೂಪಕ್ಕೆ ತರಲು ಕಾರ್ಯಾದೇಶ ಹೊರಡಿಸುವಂತೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಪೃಥ್ವಿರಾಜ್​ ಶೆಟ್ಟಿ ಮನವಿ ಸಲ್ಲಿಸಿದರು. ಅಭಿರಾಜ್​ ಸುವರ್ಣ, ಪ್ರಸಾದ್​ ಬಿಲ್ಲವ, ಅರ್ಜುನ್​ ಪ್ರಭು, ಶ್ರೀವತ್ಸ, ನಿತಿನ್​ ಪೈ, ಪೃಥ್ವಿರಾಜ್​ ಮಣಿಪಾಲ್​, ನಿಖಿಲ್​ ಮಡಿವಾಳ್​ ಇತರರಿದ್ದರು.
ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್​ ಭಾರತ್​ ಯೋಜನೆ ಕಾರ್ಯರೂಪಕ್ಕೆ ತರಲು ಕಾರ್ಯಾದೇಶ ಹೊರಡಿಸುವಂತೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಪೃಥ್ವಿರಾಜ್​ ಶೆಟ್ಟಿ ಮನವಿ ಸಲ್ಲಿಸಿ ಮಾತನಾಡಿದರು.

ಕಾರ್ಯಾದೇಶ ಹೊರಡಿಸಿ

ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಸಾರ್ವಜನಿಕರಿಗೆ ಆಯುಷ್ಮಾನ್​ ಭಾರತ್​ ಯೋಜನೆ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ತಾವು ಸೂಕ್ತ ಆಡಳಿತಾತ್ಮಕ ಕಾರ್ಯಾದೇಶ ಹೊರಡಿಸಬೇಕೆಂದು ವಿನಂತಿಸುತ್ತೇವೆ. ಇಲ್ಲದಿದ್ದಲ್ಲಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿರಾಜ್​ ಸುವರ್ಣ, ಉಪಾಧ್ಯಕ್ಷರಾದ ಪ್ರಸಾದ್​ ಬಿಲ್ಲವ, ಅರ್ಜುನ್​ ಪ್ರಭು, ಉಡುಪಿ ನಗರ ಯುವಮೋರ್ಚಾ ಅಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ನಿತಿನ್​ ಪೈ, ಯುವ ಮೋರ್ಚಾ ಮುಖಂಡ ಪೃಥ್ವಿರಾಜ್​ ಮಣಿಪಾಲ್​, ನಿಖಿಲ್​ ಮಡಿವಾಳ್​, ಧನುಷ್​ ಕಡಿಯಾಳಿ ಹಾಗೂ ಯುವ ಮೋರ್ಚಾದ ಕಾರ್ಯಕರ್ತರು ಇದ್ದರು.

ಜಿಲ್ಲಾಡಳಿತದಿಂದ ತನಿಖೆ ನಡೆಸಿ

ಕೆಲವು ಖಾಸಗಿ ಆಸ್ಪತ್ರೆಯವರು ಆಯುಷ್ಮಾನ್​ ಭಾರತ್​ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ನೀಡದೆ ಕಡೆಗಣಿಸುತ್ತಿದ್ದಾರೆ. ಅದರಿಂದ ಬಡ ಜನರಿಗೆ ತುಂಬ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕ ವಲಯದಿಂದ ಸಾಕಷ್ಟು ದೂರು ಕೇಳಿ ಬರುತ್ತಿದೆ. ಆರೋಗ್ಯಕ್ಕೆ ಸಂಬಂಧಿತ ಈ ವಿಚಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಸೂಕ್ತ ತನಿಖೆ ನಡೆಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net