ಬಿಜೆಪಿ ಧಾರವಾಡ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ತೀವ್ರ ಪೈಪೋಟಿ, ಲೋಕಸಮರದ ಹಿನ್ನೆಲೆಯಲ್ಲಿ ಮಹತ್ವ ಪಡೆದ ಆಯ್ಕೆ

Screenshot_20231229-133532_1.jpg
Published on

ಹುಬ್ಬಳ್ಳಿ: ಲೋಕಸಮರದ ಹಿನ್ನೆಲೆಯಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿರುವ ಬಿಜೆಪಿಯಲ್ಲಿ ಇದೀಗ ಜಿಲ್ಲಾ ಮಟ್ಟದಲ್ಲೂ ಹೊಸ ಸಾರಥಿಗಳ ಆಯ್ಕೆಗೆ ಕಸರತ್ತುಗಳು ನಡೆದಿವೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕದ ನಂತರ ಪಕ್ಷದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಮುಂಬರುವ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷದ ವಿವಿಧ ಘಟಕಗಳಿಗೆ ಹೊಸಬರ ನೇಮಕಕ್ಕೆ ತಯಾರಿಗಳು ನಡೆದಿವೆ.

ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ಮಹಾನಗರ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಇದಕ್ಕಾಗಿ ಡಿ. 30 ಹಾಗೂ 31ರಂದು ನಗರದ ಖಾಸಗಿ ಹೋಟೆಲ್ನಲ್ಲಿ ಸಭೆಗಳು ಏರ್ಪಾಟಾಗಿವೆ.

ಪಕ್ಷದ ವೀಕ್ಷಕರು, ಹಿರಿಯ ನಾಯಕರು ಪಾಲ್ಗೊಳ್ಳಲಿರುವ ಸಭೆಯಲ್ಲಿ ಆಕಾಂಕ್ಷಿಗಳು ತಮ್ಮದೇ ಶೈಲಿಯಲ್ಲಿ ತೆರೆಮರೆಯಲ್ಲಿ ಲಾಭಿ ಮಾಡಲು ಮುಂದಾಗಿದ್ದಾರೆ. ಈ ಮಧ್ಯೆ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಗಳು ತೀವ್ರ ಪೈಪೋಟಿ ನಡೆಸಿದ್ದಾರೆ.

ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇದೇ ತಿಂಗಳು ಕೊನೆಯಲ್ಲಿ ಸಭೆಗಳನ್ನು ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಕೆಲ ದಿನಗಳ ನಂತರ ಅಂತಿಮವಾಗಿ ಆಯ್ಕೆ ಪಟ್ಟಿ ತಯಾರಿಸುವ ಸಿದ್ಧತೆಯಲ್ಲಿ ವರಿಷ್ಠರು ಇದ್ದಾರೆ.

ಈ ಮೊದಲು ಶಾಸಕ ಅರವಿಂದ ಬೆಲ್ಲದ ಅವರು ಮಹಾನಗರ ಜಿಲ್ಲಾಧ್ಯಕ್ಷರಾಗಿದ್ದರು. ಅವರು ಕಾರ್ಯಬಾಹುಳ್ಯದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಧಾರವಾಡದವರಾದ ಸಂಜಯ ಕಪಟಕರ ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿತ್ತು. ಕಪಟಕರ ಅವರು 17 ತಿಂಗಳು ಮಹಾನಗರ ಜಿಲ್ಲಾಧ್ಯಕ್ಷರಾಗಿ ಪಕ್ಷದ ಕೆಲಸ ಮಾಡಿದ್ದು, ತಮ್ಮನ್ನೇ ಮುಂದುವರಿಸಬೇಕೆಂದು ಕೇಳುವ ಸಾಧ್ಯತೆಯೂ ಇದೆ.
ಇನ್ನುಳಿದಂತೆ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಸತೀಶ ಶೇಜವಾಡಕರ, ತಿಪ್ಪಣ್ಣ ಮಜ್ಜಗಿ, ಈರೇಶ ಅಂಚಟಗೇರಿ, ಶಿವು ಮೆಣಸಿನಕಾಯಿ, ಮಾಧ್ಯಮ ವಕ್ತಾರ ರವಿ ನಾಯಕ, ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ ಸೇರಿ ಹಲವು ರೇಸ್ನಲ್ಲಿದ್ದಾರೆ.

ಬಸವರಾಜ ಕುಂದಗೋಳಮಠ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿದ್ದಾರೆ. ಇದೀಗ ಗ್ರಾಮೀಣ ಜಿಲ್ಲಾಧ್ಯಕ್ಷರಾಗಲು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಮಹಾಂತೇಶ ಶ್ಯಾಗೋಟಿ, ಶಿವಾನಂದ ಗುಂಡಗೋವಿ, ನಿಂಗಪ್ಪ ಸುತಗಟ್ಟಿ ಸೇರಿ ಹಲವು ಪ್ರಯತ್ನ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net