ಸರ್ಕಾರಿ ಯೋಜನೆಯ ಸೌಲಭ್ಯ ಪಡೆಯಲು ಸಲ್ಲಿಕೆಯಾಗುವ ಸಾಲದ ಅರ್ಜಿಗಳನ್ನು ತಿರಸ್ಕರಿಸದಿರಿ

LEAD BANK
Published on

ಕಾರವಾರ: ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ವಿವಿಧ ಸರಕಾರಿ ಯೋಜನೆಗಳಿಗೆ ತಾವು ನೀಡುವ ಸಾಲದ ಕುರಿತು ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ಮತ್ತು ಸಾಲ ಮೇಳ ಆಯೋಜಿಸುವ ಮೂಲಕ ಜಿಲ್ಲೆಯ ಸಾರ್ವಜನಿಕರಿಗೆ ಸರಕಾರದಿಂದ ದೊರೆಯುವ ಎಲ್ಲಾ ವಿಧದ ಆರ್ಥಿಕ ನೆರವನ್ನು ಸುಲಭ ರೀತಿಯಲ್ಲಿ ಒದಗಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ,ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಬ್ಯಾಂಕ್ ಗಳಲ್ಲಿ ಸಾಲ ಮತ್ತು ಠೇವಣಿ ಅನುಪಾತ ಶೇ.60 ರಷ್ಟಿರಬೇಕು ಆದರೆ ಪ್ರಸ್ತುತ ಶೇ.46.56 ರಷ್ಠಿದೆ.

2025 ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್ ಗಳಲ್ಲಿ 24,315 ಕೋಟಿ ರೂ ಠೇವಣಿ ಸ್ವೀಕೃತವಾಗಿದ್ದು, 11,322 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದ ಅವರು, ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಸಲ್ಲಿಕೆಯಾಗುವ ಅರ್ಜಿಗಳನ್ನು ಸಣ್ಣಪುಟ್ಟ ಕಾರಣಗಳಿಗೆ ತಿರಸ್ಕೃತಗೊಳಿಸಬೇಡಿ, ಜಿಲ್ಲೆಯಲ್ಲಿ ಕೃಷಿ, ವಸತಿ , ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಶೈಕ್ಷಣಿಕ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸುವಂತೆ ತಿಳಿಸಿದರು.

ಬ್ಯಾಂಕ್ ಗಳಿಗೆ ಆಗಮಿಸುವ ಹಿರಿಯ ನಾಗರೀಕರು, ವಿಕಲಚೇತನರು ಮತ್ತು ಪಿಂಚಣಿ ದಾರರ ಸಮಸ್ಯೆಗಳಿಗೆ ತ ಕ್ಷನ ಸ್ಪಂದಿಸಿ ಅವರಿಗೆ ಆದ್ಯತೆಯಲ್ಲಿ ಸೇವೆಯನ್ನು ಒದಗಿಸುವಂತೆ ತಿಳಿಸಿದ ಅವರು , ಅತ್ಯಂತ ಕಡಿಮೆ ವೆಚ್ಚದ ವಿಮಾ ಯೋಜನೆಗಳಿಗೆ ಎಲ್ಲರನ್ನೂ ನೊಂದಾಯಿಸಬೇಕು ಎಂದರು.

ಜಿಲ್ಲೆಯ ಸರಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನರೇಗಾ ಕಾರ್ಮಿಕರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 2025 ಮಾರ್ಚ್ ಅಂತ್ಯದ ತ್ರೈ ಮಾಸಿಕದಲ್ಲಿ ಕೃಷಿ ಕ್ಷೇತ್ರಕ್ಕೆ 3275 ಕೋಟಿ, ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ  ವಲಯಕ್ಕೆ 2773 ಕೋಟಿ, ಶೈಕ್ಷಣಿಕ ಕ್ಷೇತ್ರಕ್ಕೆ 73 ಕೋಟಿ , ವಸತಿ ಕ್ಷೆತ್ರಕ್ಕೆ 65 ಕೋಟಿ ಸೇರಿದಂತೆ ಆದ್ಯತಾವಲಯಕ್ಕೆ ಒಟ್ಟು 6323 ಕೋಟಿ ಸಾಲ ವಿತರಿಸಿ ಶೆ.101 ಸಾಧನೆ ಮಾಡಲಾಗಿದ್ದು, ಆದ್ಯೇತರ ವಲಯಕ್ಕೆ 2451 ಕೋಟಿ ವಿತರಿಸುವ ಮೂಲಕ ಶೆ.129 ರಷ್ಟು ಸಾಧನೆ ಮಾಡಲಾಗಿದೆ ಎಂದು ಕೆನರಾ ಬ್ಯಾಂಕ್ ನ ಪ್ರಾದೇಶಿಕ ಮೆನೇಜರ್ ನಾಗರಾಜ ರೆಡ್ಡಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದ್ ಸಾ ಹಬೀಬ್, ಯೋಜನಾ ನಿರ್ದೇಶಕ ಕರೀಂ ಅಸಾದಿ, ನಬಾರ್ಡ್ ನ ಮೆನೇಜರ್ ಸುಶೀಲ್ ನಾಯಕ್, ಆರ್.ಬಿ.ಐ ನ ಅಧಿಕಾರಿ ಮೋನಿ ರಾಜಾ ಬ್ರಹ್ಮ, ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ರಾಜಪ್ಪ ಹಾಗೂಐ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳ ಅಧಿಕಾರಿಗಳು ಹಾಜರಿದ್ದರು. 2025-26 ರ ಜಿಲ್ಲಾ ಸಾಲ ಯೋಜನೆಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net