೪,೫೦೦ ಕೋಟಿ ರೂ. ಗುರಿಯ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ

17adarshkdga2
Published on

ಮಡಿಕೇರಿ: ಜಿಲ್ಲಾ ಅಗ್ರಣೀ(ಲೀಡ್) ಬ್ಯಾಂಕ್‌ನ ೨೦೨೧-೨೨ನೇ ಸಾಲಿಗೆ ೪,೫೦೦ ಕೋಟಿ ರೂ. ಗುರಿಯ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಬುಧವಾರ ಬಿಡುಗಡೆ ಮಾಡಿದರು.

ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶೇಷ ಸಮನ್ವಯ ಸಮಿತಿ ಸಭೆಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್, ಲಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಕೃಷಿಕರಿಗೆ ಸಾಲ ವಿತರಿಸುವ ಮೂಲಕ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು. ಕೃಷಿಕರು ಉತ್ಪಾದಿಸಿದ ಉತ್ಪನ್ನದಿಂದ ರೈತರಿಗೆ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ಕಲ್ಪಿಸಬೇಕಿದೆ ಎಂದರು.

ಭಾರತೀಯ ಯೂನಿಯನ್ ಬ್ಯಾಂಕ್ ಮೈಸೂರು ವಲಯ ಸಹಾಯಕ ಮಹಾ ಪ್ರಬಂಧಕ ರವಿಚಂದರ್ ಮಾತನಾಡಿ, ೨೦೨೧-೨೨ ನೇ ಸಾಲಿಗೆ ಜಿಲ್ಲಾ ವಾರ್ಷಿಕ ಸಾಲ ಯೋಜನೆಯಡಿ ೪,೫೦೦ ಕೋಟಿ ರೂ. ಗುರಿ ನಿಗಧಿಪಡಿಸಲಾಗಿದೆ. ಅದರಲ್ಲಿ ೮೭ ಪ್ರತಿಶತ ೩,೯೦೦ ಕೋಟಿ ರೂ. ಆದ್ಯತಾ ವಲಯಕ್ಕೆ ಮೀಸಲಿಡಲಾಗಿದೆ. ಕೃಷಿ ಚಟುವಟಿಕೆಗೆ ೨,೬೦೦ ಕೋಟಿ ರೂ., ಕಿರು ಮತ್ತು ಮಧ್ಯಮ ಕ್ಷೇತ್ರಕ್ಕೆ ೭೦೦ ಕೋಟಿ ರೂ. ಹಾಗೂ ಇತರೆ ಆದ್ಯತಾ ವಲಯಕ್ಕೆ ೬೦೦ ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಸಾಲ ವಿತರಿಸುವುದರ ಮೂಲಕ ನಿಗದಿಪಡಿಸಿರುವ ಗುರಿಯ ಪ್ರಗತಿ ಸಾಧಿಸಬೇಕು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಲೀಡ್ ಬ್ಯಾಂಕ್ ಮುಖ್ಯಸ್ಥ ಆರ್.ಕೆ.ಬಾಲಚಂದ್ರ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಲಾಗಿದೆ. ಈ ಕ್ರಿಯಾ ಯೋಜನೆಯು ನಬಾರ್ಡ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯ ನೆರವನ್ನು ಪಡೆದು ಬ್ಯಾಂಕ್‌ಗಳ ವಲಯವಾರು ಹಂಚಿಕೆಗೆ ಅನುಸಾರವಾಗಿ ವಾರ್ಷಿಕ ಸಾಲ ಯೋಜನೆ ಗುರಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಲೀಡ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರಾಮಚಂದ್ರ ನಾಯಕ್, ಕೆನರಾ ಬ್ಯಾಂಕಿನ ಪ್ರಬಂಧಕ ಜಿ.ಸಿ.ಪ್ರಕಾಶ್, ಎಸ್‌ಬಿಐ ನ ಮುಖ್ಯ ಪ್ರಬಂಧಕ ದಿನೇಶ್ ಪೈ, ಕಾವೇರಿ ಗ್ರಾಮೀಣ ಬ್ಯಾಂಕಿನ ವಲಯ ಪ್ರಬಂಧಕ ಅಶೋಕ, ನಬಾರ್ಡ್ ಅಧಿಕಾರಿ ಶ್ರೀನಿವಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net