

ಮಂಡ್ಯ: ವೈದ್ಯರ ಸಲಹೆ ಇಲ್ಲದೆ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಗುವ ಮಾತ್ರೆಗಳನ್ನು ಖರೀದಿಸಿ ಅಕ್ರಮ ಗರ್ಭಪಾತ ನಡೆಯುತ್ತಿವೆ ಎಂಬ ದೂರು ಕೇಳಿ ಬರುತ್ತಿದೆ. ಆದ್ದರಿಂದ ಎಲ್ಲ ಮೆಡಿಕಲ್ ಸ್ಟೋರ್‌ಗಳ ಮೇಲೆ ತೀವ್ರ ನಿಗಾ ಇಟ್ಟು ಪರಿಶೀಲನೆ ನಡೆಸಿ ಹಾಗೂ ಔಷಧ ಮಾರಾಟಗಾರರಿಗೆ ಸೂಕ್ತ ಕಾರ್ಯಾಗಾರವನ್ನು ಏರ್ಪಡಿಸಿ ತಿಳಿವಳಿಕೆ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ(ದುರ್ಬಳಕೆ ಮತ್ತು ತಡೆ) ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆ ಹಾಗೂ ಜಿಲ್ಲಾ ತಪಾಸಣಾ ಮೇಲ್ವಿಚಾರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಸ್ಕಾೃನಿಂಗ್ ಸೆಂಟರ್‌ಗೆ ಧಿಡೀರ್ ಭೇಟಿ ನೀಡಿ ತಪಾಸಣೆ ಮಾಡಬೇಕು. ಯಾವುದೇ ರೀತಿಯ ಅನುಮಾನ ಬಂದಲ್ಲಿ ಅವರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಿ. ಭ್ರೂಣ ಹತ್ಯೆ ತಡೆಗಟ್ಟುವ ಬಗ್ಗೆ ಪ್ರತಿ ಗ್ರಾಮ ಸಭೆಗಳಲ್ಲಿ ಚರ್ಚೆ ನಡೆಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ಸ್ಕ್ಯಾನಿಂಗ್ ಸೆಂಟರ್ ಹಾಗೂ ಮೆಡಿಕಲ್ ಸ್ಟೋರ್‌ಗಳ ಮೇಲೆ ತೀವ್ರ ನಿಗಾ ಇಟ್ಟು ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಜಿಲ್ಲೆಯಲ್ಲಿ ಇದುವರೆಗೂ ಭ್ರೂಣಹತ್ಯೆಗೆ ಸಂಬಂಧಿಸಿದಂತೆ ದಾಳಿ ನಡೆಸಿದಾಗ ಸೆಂಟರ್‌ಗಳಲ್ಲಿ ಹೆಚ್ಚುವರಿ ಸ್ಕಾೃನಿಂಗ್ ಯಂತ್ರಗಳು ಇರುವುದು ಕಂಡುಬಂದಿದೆ. ಇವುಗಳನ್ನು ವಶಪಡಿಸಿಕೊಂಡು ಸೆಂಟರ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹೆಣ್ಣು ಭ್ರೂಣಪತ್ತೆ ಮಾಡುತ್ತಿದ್ದ ಹಾಗೂ ಅಕ್ರಮ ಗರ್ಭಪಾತ ನಡೆಸುತ್ತಿದ್ದ ಒಟ್ಟು 37 ಜನರ ಮೇಲೆ ಪ್ರಕರಣ ದಾಖಲಾಗಿದೆ. ಇವರಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ಜನರು ಈ ರೀತಿಯ ಕೃತ್ಯಕ್ಕೆ ಮುಂದಾಗುವುದಿಲ್ಲ. ಜಿಲ್ಲೆಯಲ್ಲಿ ಯಾವುದೇ ಭ್ರೂಣ ಹತ್ಯೆ ಮತ್ತು ಭ್ರೂಣ ಪತ್ತೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಪಿ.ಸಿ ಹಾಗೂ ಪಿ.ಎನ್.ಡಿ.ಟಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಿ. ಡಿಸೆಂಬರ್ 20, 21, 22 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ವಿಶೇಷ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 59 ಸ್ಕಾೃನಿಂಗ್ ಸೆಂಟರ್‌ಗಳಿವೆ. ಮಂಡ್ಯ ತಾಲೂಕಿನಲ್ಲಿ- 27, ಮದ್ದೂರಿನಲ್ಲಿ 6, ಮಳವಳ್ಳಿ 7, ಪಾಂಡವಪುರ 5, ಶ್ರೀರಂಗಪಟ್ಟಣ 3, ಕೆ.ಆರ್.ಪೇಟೆ 6, ನಾಗಮಂಗಲ ತಾಲೂಕಿನಲ್ಲಿ 5 ಸೆಂಟರ್‌ಗಳಿವೆ. ಪ್ರತಿ 3 ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ಕುಮಾರ್, ಸ್ತ್ರೀ ರೋಗ ತಜ್ಞ ವೈದ್ಯರಾದ ಡಾ.ಜ್ಯೋತಿ, ಡಾ.ಮನೋಹರ್, ಡಾ.ದೇವಿಕಾ, ನಿವೃತ್ತ ಡಿಎಚ್‌ಒ ಡಾ.ಮರೀಗೌಡ, ಮುಖಂಡರಾದ ಜಯಲಕ್ಷ್ಮೀ, ಜನಾರ್ಧನ್ ಇತರರಿದ್ದರು.