

ಮಂಡ್ಯ: ಜಿಲ್ಲೆಯಲ್ಲಿ ಕೆಲವು ಆಲೆಮನೆಗಳಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಳಸಿ ಬೆಲ್ಲ ತಯಾರಿಕೆ ಮಾಡುತ್ತಿದ್ದಾರೆ. ಇದನ್ನು ತಡೆಯಲು ದಾಳಿಗಳನ್ನು ಹೆಚ್ಚಿಸಿ ಕ್ರಮ ಕೈಗೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಬೆಲ್ಲ ತಯಾರಿಕೆಗೆ ಬ್ಲೀಚಿಂಗ್ ಏಜೆಂಟ್ಸ್ ಸಫೋಲೆಟ್ ಸೋಡಿಯಂ ಬೈ ಕಾರ್ಬೋನೆಟ್, ಪಾಸ್ಫೋರಿಕ್ ಆ್ಯಸಿಡ್, ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಕಲರಿಂಗ್ ಏಜೆಂಟ್ಸ್ ಬಳಸುವುದು ಕಂಡುಬರುತ್ತಿದೆ. ಇದನ್ನು ತಡೆಯಲು ಜಿಲ್ಲೆಯ ಎಲ್ಲ ಬೆಲ್ಲ ತಯಾರಿಕಾ ಘಟಕಗಳಿಗೆ ಕಾರ್ಯಾಗಾರ ಮಾಡಿ ಮಾಹಿತಿ ನೀಡಿ ಎಂದರು.
ಆಹಾರ ಪದಾರ್ಥ ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದು, ಇವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳಲು ನಿಯಮಗಳ ಬಗ್ಗೆ ತಿಳಿಸಬೇಕು. ಹಾಪ್‌ಕಾಮ್ಸ್, ನ್ಯಾಯಬೆಲೆ ಅಂಗಡಿ, ಡೇರಿ, ಹೋಟೆಲ್, ಕ್ಯಾಟರಿಂಗ್‌ಗಳೂ ಸಹ ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು ಎಂದು ಹೇಳಿದರು.
ಆಹಾರ ದೇಹದ ಶಕ್ತಿ ವೃದ್ಧಿಸಬೇಕು. ಆದರೆ ಇಂದು ಜನರು ಸುರಕ್ಷಿತವಲ್ಲದ ಆಹಾರ ಸೇವಿಸಿ ಕ್ಯಾನ್ಸರ್ ಹಾಗೂ ಮುಂತಾದ ರೋಗಗಳಿಂದ ಬಳಲುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳಲ್ಲಿ ಕೆಲವರು ಆಹಾರ ತಯಾರಿಕೆ ವೇಳೆ ವಿಷಕಾರಿ ಟೇಸ್ಟಿಂಗ್ ಪೌಡರ್, ಕಲರ್‌ಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಆಹಾರ ಸುರಕ್ಷತಾ ಕಚೇರಿ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.
ಅನಧಿಕೃತ ಆಹಾರ ಘಟಕಗಳಿಗೆ ಅಂಕಿತ ಅಧಿಕಾರಿಗಳು ಮತ್ತು ಅವರ ತಂಡ ದಾಳಿ ನಡೆಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಸಹಕಾರ ಮತ್ತು ರಕ್ಷಣೆ ನೀಡುವ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಧರಣಿಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಎಸ್. ನಿರ್ಮಲಾ ಇತರರಿದ್ದರು.