

ರಾಯಚೂರು ಕನ್ನಡವನ್ನು ಶ್ರೀಮಂತಗೊಳಿಸಲು ಡಾ.ರಾಜ್‌ಕುಮಾರ್ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ರಾಜಕುಮಾರ ಎಂದರೆ ಒಂದು ಶಕ್ತಿಯಾಗಿದ್ದಾರೆ ತಹಸೀಲ್ದಾರ್ ಸುರೇಶ ವರ್ಮಾ ಹೇಳಿದರು.
ನಗರದ ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ತು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಡಾ.ರಾಜ್‌ಕುಮಾರ್ ಜಯಂತ್ಯೋತ್ಸವ ಸಮಿತಿಯಿಂದ ವತಿಯಿಂದ ಆಯೋಜನೆ ಮಾಡಲಾಗಿದ್ದ ವರನಟ ಡಾ.ರಾಜ್‌ಕುಮಾರ ಅವರ ೯೭ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್‌ಕುಮಾರ ಅವರ ಜನ್ಮದಿನವು ಕರ್ನಾಟಕ ಮಾತ್ರವಲ್ಲದೇ ದೇಶಾದಾದ್ಯಂತ ಸಂತಸಪಡುವ ದಿನವಾಗಿದೆ.
ಕನ್ನಡಕ್ಕೆ ರಾಜ್ ಕುಮಾರ ಅವರು ನೀಡಿದ ಕೊಡುಗೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಕನ್ನಡಗರಿಗೆ, ಕನ್ನಡ ನಾಡಿಗೆ ಇದೊಂದು ಪವಿತ್ರ ಕಾರ್ಯಕ್ರಮವಾಗಿದೆ ಎಂದರು. ರಾಜಕುಮಾರ ಒಬ್ಬ ಕನ್ನಡದ ಮೇರು ನಟರಾಗಿದ್ದರು, ಅವರು ಕನ್ನಡ ಚಿತ್ರ ರಂಗದಲ್ಲಿ ಇರದೇ ಹೋಗಿದ್ದರೆ ಚಿತ್ರರಂಗ ಹಾಗೂ ಕನ್ನಡ ಶ್ರೇಷ್ಠ ಸ್ಥಾನಮಾನವನ್ನು ಪಡೆದುಕೊಳ್ಳುತ್ತಿರಲಿಲ್ಲ.
ಕನ್ನಡವನ್ನು ಶ್ರೀಮಂತಗೊಳಿಸಲು ಡಾ.ರಾಜ್‌ಕುಮಾರ್, ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಪ್ರತಿಯೊಬ್ಬರು ಕನ್ನಡವನ್ನು ಮೈಗೂಡಿಸಿಕೊಳ್ಳಲು ಮುಂದಾಗಬೇಕು. ಡಾ. ರಾಜಕುಮಾರ ಪ್ರತಿಯೊಂದು ಪಾತ್ರದಲ್ಲಿಯೂ ಅತ್ಯುತ್ತಮವಾಗಿ ನಟನೆ ಮಾಡಿ ಜನರ ಮನಸ್ಸಿನಲ್ಲಿ ನೆಲೆ ಮಾಡಿರುವುದು ಮಾತ್ರವಲ್ಲದೇ ಗೋಕಾಕ್ ಚಳವಳಿಯಲ್ಲಿಯೂ ಭಾಗಿಯಾಗಿ, ಕನ್ನಡ ಭಾಷೆ, ನೆಲ, ಜಲ ರಕ್ಷಣೆಗೆ ಮುಂದಾಗಿದ್ದರು.
ವಾರ್ತಾಽಕಾರಿ ಗವಿಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ರಾಜ್‌ಕುಮಾರ ಬಹುದೊಡ್ಡ ವ್ಯಕ್ತಿತ್ವ ಹೊಂದಿದವರಾಗಿದ್ದರು. ರಾಜ್ ಕುಮಾರ ಅವರ ಹಾಡುಗಳನ್ನು ಕೇಳುತ್ತಲೇ ಹಲವರು ಜೀವನ ಕಟ್ಟುಕೊಂಡಿದ್ದಾರೆ. ರಾಜ್‌ಕುಮಾರ್‌ಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಡಾ.ರಾಜ್‌ಕುಮಾರ ಅವರ ಮೇಲಿನ ಅಭಿಮಾನವು ದೇಶ ಹಾಗೂ ಕಾಲವನ್ನು ಮೀರಿದ್ದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್, ಕಸಾಪ ತಾಲೂಕು ಕಾರ್ಯದರ್ಶಿ ರಾವುತರಾವ್ ಬರೂರ್, ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಜೆ.ಎಲ್.ಗೋಪಿ, ವಾರ್ತಾ ಇಲಾಖೆಯ ಪ್ರದಸ ಲಿಂಗರಾಜ ನಾರಾಯಣಪುರ ಸೇರಿದಂತೆ ಅನೇಕರು ಇದ್ದರು.