

ಮೈಸೂರು: ಬರಗಾಲ ಸಂದರ್ಭದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗೋಶಾಲೆ ತೆರೆಯಲು ಜಿಲ್ಲಾಡಳಿತ ಕ್ರಿಯಾಯೋಜನೆ ರೂಪಿಸಿ ಅಗತ್ಯ ತಯಾರಿ ಮಾಡಿಕೊಂಡಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಬರಗಾಲ ಪರಿಹಾರ ಕಾರ್ಯ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 69 ಕೋಟಿ ರೂ. ಮೌಲ್ಯದಷ್ಟು ಬೆಳೆ ನಷ್ಟವಾಗಿದೆ. ಈಗಾಗಲೇ ಸರ್ಕಾರ 20 ಕೋಟಿ ರೂ. ಬಿಡುಗಡೆ ಮಾಡಿದೆ. ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ಹಂತ ಹಂತವಾಗಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮುಂದಿನ ಜುಲೈವರೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಒಂದು ವೇಳೆ ನೀರಿನ ಸಮಸ್ಯೆ ಎದುರಾಗಬಹುದಾದ 170 ಗ್ರಾಮಗಳನ್ನು ಗುರುತಿಸಲಾಗಿದೆ. ಜಾನುವಾರುಗಳಿಗೆ ಮೇವು, ಗೋಶಾಲೆ ಮತ್ತು ನೀರಿನ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ಮಾತನಾಡಿ, ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದಿಂದ ಜಿಲ್ಲೆಯಲ್ಲಿ 82,500 ಎಕರೆಯಷ್ಟು ಬೆಳೆ ನಷ್ಟವಾಗಿದ್ದು, 70 ಕೋಟಿ ರೂ. ಆದಾಯ ಖೋತಾ ಆಗಿದೆ. ರಾಗಿ, ಹತ್ತಿ, ಜೋಳ, ಅವರೆ, ಅಲಸಂದೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಈಗಾಗಲೇ ಶೇ.50ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ. ಉಳಿದ ಕೆಲಸವೂ ಪ್ರಗತಿಯಲಿದೆ. ಈಗಾಗಲೇ ಫ್ರೂಟ್ಸ್ ಐಡಿಯಲ್ಲಿ ರೈತರನ್ನು ನೋಂದಣಿ ಮಾಡಿಸುವ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ಕೆ.ಆರ್. ಆಸ್ಪತ್ರೆ ಸೇರಿದಂತೆ ವಿವಿಧೆಡೆ ಕೈಗೊಂಡಿರುವ ನವೀಕರಣ ಕಾಮಗಾರಿಗಳು ವಿಳಂಬವಾಗಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ, ಚೆಲುವಾಂಬ ಮಕ್ಕಳ ಆಸ್ಪತ್ರೆಯ ಸೀತಾರಂಗ ಒಪಿಡಿ ಕೆಲಸ ಮುಗಿದಿದೆ. ಬಾಕಿ ಕಾಮಗಾರಿ ನಡೆಯುತ್ತಿವೆ. ಡಿಸೆಂಬರ್ ಹೊತ್ತಿಗೆ ಕೆಲಸ ಮುಗಿಯಬೇಕಿತ್ತು. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯಾಗದ ಕಾರಣ ವಿಳಂಬವಾಗಿದೆ. ಮುಂದಿನ ಮಾರ್ಚ್ ಹೊತ್ತಿಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ದೊಡ್ಡ ಗುತ್ತಿಗೆದಾರರು ಸರ್ಕಾರದಿಂದ ಬರುವ ಅನುದಾನವನ್ನು ಕಾಯದೆ ಕೆಲಸವನ್ನು ಮುಗಿಸಬೇಕು. ಆಡಳಿತಾತ್ಮಕ ಅನುಮೋದನೆ ನೀಡಿದ ಮೇಲೆ ಹಣ ಬಿಡುಗಡೆಯಾಗಲಿದೆ. ಕೂಡಲೇ ಉಳಿದ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಆವರಣದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಐದು ಎಕರೆ ಜಾಗ ಮಂಜೂರಾಗಿದ್ದು, ಭೂಮಿ ಹಸ್ತಾಂತರವಾದ ಮೇಲೆ ಕಾಮಗಾರಿ ಶುರುವಾಗಲಿದೆ ಎಂದು ಡೀನ್ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಎ.ಎಸ್. ರಂಜಿತ್‌ಕುಮಾರ್ ಮಾತನಾಡಿ, ಹಳೇ ಉಂಡುವಾಡಿ ಕುಡಿಯುವ ನೀರಿನ ಯೋಜನೆ ಪ್ರಗತಿಯಲಿದ್ದು, ಜಾಕ್‌ವೆಲ್ ನಿರ್ಮಾಣ ಕಾರ್ಯ ಮುಗಿದಿದೆ. 150 ಎಂಎಲ್‌ಡಿ ಸಾಮರ್ಥ್ಯದ ವಾಟರ್ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆದಿದೆ. ಬಾಚಹಳ್ಳಿ, ಹುಣಸೂರು ತಾಲೂಕಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಈ ಯೋಜನೆಯಡಿ 164 ಗ್ರಾಮಗಳಿಗೆ ನೀರು ಸರಬರಾಜು ಮಾಡಬಹುದು ಎಂದು ಹೇಳಿದರು.
ಜಲಮೂಲದಿಂದ ನೀರು ಒದಗಿಸುವುದಕ್ಕೆ ಎಚ್.ಡಿ.ಕೋಟೆ 4, ತಿ.ನರಸೀಪುರ, ನಂಜನಗೂಡು ತಾಲೂಕಿನಲ್ಲಿ ತಲಾ ಎರಡು ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದರು.
ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳಸೋಗೆ ಯೋಜನೆಯು ವಿಳಂಬವಾಗಿರುವ ಬಗ್ಗೆ ಪ್ರಸ್ತಾಪಿಸಿದ ಸಂಸದರು, ಕೂಡಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ ಕಾಮಗಾರಿಯನ್ನು ತ್ವರಿತವಾಗಿ ಮಾಡಿಸಬೇಕು ಎಂದು ಸೂಚಿಸಿದರು.
ರಾಯನಕೆರೆ ಬಳಿ 300 ಎಂಎಲ್‌ಡಿ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ 571 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಸರ್ಕಾರ ಮೊದಲ ಹಂತದಲ್ಲಿ 180 ಎಂಎಲ್‌ಡಿ ಸಂಸ್ಕರಣಾ ಘಟಕಕ್ಕೆ ಅನುಮತಿ ನೀಡಿದೆ. ಅದೇ ರೀತಿ ವಿದ್ಯಾರಣ್ಯಪುರಂ, ಕೆಸರೆ ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಹೆಚ್ಚುವರಿ 30 ಎಂಎಲ್‌ಡಿ ಸಂಸ್ಕರಣೆಗೂ ಅನುಮತಿ ನೀಡಿದೆ ಎಂದು ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಹೇಳಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸ್ಥಾನ ಪಡೆದು ತವರೂರಿನ ಸಿಎಂ ಮರ್ಯಾದೆ ಉಳಿಸಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಡಿಡಿಪಿಐಗೆ ಸೂಚಿಸಿದರು.
ಜಿಯಾಗ್ರಾಫಿಕಲ್ ಇಂಡಿಕೇಷನ್(ಜಿಐ) ಟ್ಯಾಗ್ ಮಾನ್ಯತೆ ಪಡೆದಿರುವ ಮೈಸೂರು ವೀಳ್ಯೆದೆಳೆ, ಮೈಸೂರು ಮಲ್ಲಿಗೆ ಮತ್ತು ನಂಜನಗೂಡು ರಸಬಾಳೆಗೆ ಹೆಚ್ಚಿನ ಪ್ರೋತ್ಸಾಹದೊಂದಿಗೆ ಪ್ರಚಾರ ಮಾಡಿ ಮಾರ್ಕೆಟಿಂಗ್ ಮಾಡಬೇಕು. ಜಿಐ ನೋಂದಣಿ ನವೀಕರಣಕ್ಕೂ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದರು ತಿಳಿಸಿದರು.
25 ಲಕ್ಷ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆಗೆ ಗುರಿ ಹೊಂದಿದ್ದು, ಈವರೆಗೆ 7.6 ಲಕ್ಷ ಕಾರ್ಡ್ ನೀಡಲಾಗಿದೆ. ನಿಗದಿತ ಗುರಿ ತಲುಪಲು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮೈಸೂರು ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಬಿಜೆಪಿಗೆ ಮೊದಲು ನೋಟಿಸ್ ಕೊಡಿ. ಉಳಿದಂತೆ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೂ ನೋಟಿಸ್ ಕೊಡಿ. ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು ಮಾಡಬೇಕು. ನಗರದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಪಾಲಿಕೆಗೆ ಸೂಚಿಸಿದರು.
ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 21 ಸಾವಿರ ಮನೆಗಳ ನಲ್ಲಿಗಳಿಗೆ ಮೀಟರ್ ಅಳವಡಿಕೆ ಮಾಡಿಲ್ಲ. ಇದರಿಂದ ಪಾಲಿಕೆಗೆ ಬರಬೇಕಾದ ಆದಾಯ ಖೋತಾವಾಗುತ್ತಿದೆ. ವಾಣಿ ವಿಲಾಸ ನೀರು ಸರಬರಾಜು ಕೇಂದ್ರ ವತಿಯಿಂದ ಮೀಟರ್ ಅಳವಡಿಕೆ ಮಾಡಬೇಕು ಎಂದು ಸಂಸದರು ಸೂಚಿಸಿದರು.