ಹವಾಮಾನ ಏರುಪೇರು, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಆದೇಶ

AHVS-7-1.jpeg
Published on

ಚಿಕ್ಕಬಳ್ಳಾಪುರ: ಹವಾಮಾನ ಏರುಪೇರಿನ ನಡುವೆ ವ್ಯಾಪಕವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆರೋಗ್ಯ ಇಲಾಖೆಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸಭಾಂಗಣದಲ್ಲಿ ಬುಧವಾರ ಕೈಗೊಂಡಿದ್ದ ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡೆಂಗ್ಯೂ, ಮಲೇರಿಯಾ, ಚಿಕುಂಗುನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ನಿಮೂರ್ಲನೆಗೆ ಆದ್ಯತೆ ನೀಡಬೇಕು. ಒಂದೆಡೆ ತ್ಯಾಜ್ಯ ನೀರು ನಿಲ್ಲದಿರಲು, ತ್ಯಾಜ್ಯ ವಸ್ತುಗಳನ್ನು ಎಸೆಯದಿರಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮನೆಯಲ್ಲಿನ ತೊಟ್ಟಿ, ಬ್ಯಾರಲ್, ಡ್ರಮ್ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಿದ ಬಳಿಕ ಪುನ@ ನೀರು ತುಂಬಿಸುವುದು, ನೀರಿನ ಶೇಖರಣೆಗಳನ್ನು ಮುಚ್ಚಿಡುವುದು, ಶಾಲಾ, ಕಾಲೇಜು, ಜೈಲು, ಹಾಸ್ಟೆಲ್, ಅಂಗನವಾಡಿ ಸೇರಿದಂತೆ ಇತರೆಡೆ ಇರುವ ನೀರಿನ ಟ್ಯಾಂಕುಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವುದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಡಿ.ಟಿ ಉಮಾ, ಜಿಲ್ಲಾ ಮಲೇರಿಯ ಅಧಿಕಾರಿ ಡಾ. ಎಮ್.ಪ್ರಕಾಶ್, ಜಿಲ್ಲಾ ಕಾರಾಗೃಹ ಅಧಿಕ್ಷಕ ಸುನೀಲ್ ಪಿ.ಗಲ್ಲೆ ಮತ್ತಿತರರು ಇದ್ದರು.

*ಡೆಂಗ್ಯೂ ಪ್ರಕರಣಗಳು
ಜಿಲ್ಲೆಯಲ್ಲಿ ಕಳೆದ 2024 ನೇ ಸಾಲಿನಲ್ಲಿ 377 ಡೆಂಗ್ಯೂ ಪ್ರಕರಣಗಳು, 2025 ನೇ ಸಾಲಿನಲ್ಲಿ ಇಲ್ಲಿಯವರೆಗೆ 6 ಪ್ರಕರಣಗಳು ವರದಿಯಾಗಿವೆ.

*ದಂಡ ವಿಧಿಸಿ 
ಕಸವನ್ನು ಎಲ್ಲೆಂದರಲ್ಲಿ ಎಸೆದು, ಅನೈರ್ಮಲ್ಯ ವಾತಾವರಣ ಸೃಷ್ಟಿಸುವವರ ವಿರುದ್ಧ ನಿರ್ದಾಣ್ಯ ಕ್ರಮ ಕೈಗೊಂಡು ದಂಡ ವಿಧಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಸ್ವಚ್ಛತೆಯನ್ನು ಕೆಡಿಸಿದರೆ ನಗರದಲ್ಲಿನ ಮನೆಗಳಿಗೆ 400 ರೂ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಮನೆಗಳಿಗೆ 200 ರೂ, ಕಚೇರಿಗಳು, ಶಾಲೆಗಳು,  ಕಾಲೇಜುಗಳು, ಉಪಾಹಾರಗೃಹಗಳು, ಹೋಟೆಲ್ಗಳು, ಲಾಡ್ಜ್ಗಳು, ರೆಸಾರ್ಟ್ಗಳು, ಹೋಂಸ್ಟೇಗಳು, ಅಮ್ಯೂಸ್ಮೆಂಟ್ ಪಾರ್ಕ್ಗಳು, ಮಾಲ್ಗಳು, ಸೂಪರ್ ಮಾರ್ಕೆಟ್ಗಳು, ಪೆಟ್ಟಿ ಅಂಗಡಿಗಳು, ತೆಂಗಿನಕಾಯಿ ಮಾರಾಟ ಮಳಿಗೆಗಳು, ಕಾರ್ಖಾನೆಗಳು, ಕೈಗಾರಿಕೆಗಳು, ಪಂಕ್ಚರ್ ರಿಪೇರಿ ಅಂಗಡಿಗಳು, ಘನತ್ಯಾಜ್ಯ ಸಂಗ್ರಹದ ಅಂಗಡಿಳಗಳು, ಸಸ್ಯ ನರ್ಸರಿ, ಸಿನಿಮಾ ಥಿಯೇಟರ್, ಕನ್ವೆನ್ಷನ್ ಹಾಲ್ಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳಿಗೆ ನಗರ ಪ್ರದೇಶಗಳಲ್ಲಿ 1000 ರೂ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 500 ರೂ ದಂಡ ವಿಧಿಸಲು ಸೂಚಿಸಿದರು.

*ಮುಂಜಾಗ್ರತಾ ಕಮ್ರ ಪಾಲಿಸಿ
ಆರೋಗ್ಯ ಹದಗೆಟ್ಟಾಗ ಕೂಡಲೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಸಮಸ್ಯೆಗಳಿಗೆ 108/104 ಉಚಿತ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್.ಮಹೇಶ್ ಕುಮಾರ್ ತಿಳಿಸಿದ್ದಾರೆ.
ಹವಾಮಾನದ ವೈಪರೀತ್ಯಗಳು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮನುಷ್ಯನ ದೇಹದ ಉಷ್ಣತೆಯು ಸಾಮಾನ್ಯವಾಗಿ 36.4 ಯಿಂದ 37.2 ಡಿಗ್ರಿ ಸೆಲಿಯಷ್ಸ ಇರುತ್ತದೆ. ಅತಿಯಾದ ಉಷ್ಣತೆಗೆ ಸಾಧಾರಣದಿಂದ ತೀವ್ರ ಜ್ವರ, ವಾಕರಿಕೆ ಇಲ್ಲವೇ ವಾಂತಿ, ತಲೆನೋವು, ಕೈ ಕಾಲು ಊತ, ಅತಿಯಾದ ಬಾಯಾರಿಕೆ, ಸ್ನಾಯುಗಳ ಸೆಳೆತ, ಕಡಿಮೆ ಪ್ರಮಾಣದ ಮೂತ್ರ ವಿಸರ್ಜನೆ, ನಿತ್ರಾಣ ಸೇರಿದಂತೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕೆ ಹಣ್ಣುಗಳ ತಂಪು ಪಾನೀಯಾ, ಪಾನಕ, ಹೆಚ್ಚಿನ ನೀರಿನಾಂಶದ ಆಹಾರ ಪದಾರ್ಥಗಳ ಸೇವನೆ, ಸಡಿಲ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸುವುದು, ಬಿಸಿಲಿನಲ್ಲಿ ಓಡಾಡುವಾಗ ಛತ್ರಿ ಇಲ್ಲವೇ ಟೋಪಿ ಬಳಕೆ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net