

ಮೈಸೂರು: ಬಿಪಿಎಲ್ ಕಾರ್ಡ್ ಹೊಂದಿರುವವರು ಆ.31ರೊಳಗೆ ಇ-ಕೆವೈಸಿ ಮಾಡಿಸಲು ಮೈಸೂರು ಜಿಲ್ಲಾಡಳಿತ ಸೂಚನೆ ನೀಡಿದೆ.
ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಇ-ಕೆವೈಸಿ (ಆಧಾರ್ ಆಧಾರಿತ ಹೆಬ್ಬೆಟ್ಟಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿರುತ್ತದೆ. ಆದ್ದರಿಂದ ಯಾರೂ ಕಳೆದ ಹಲವು ವರ್ಷಗಳಿಂದ ತಮ್ಮ ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ ಕೆ-ವೈಸಿ ಮಾಡಿಸಿರುವುದಿಲ್ಲವೋ ಅಂತಹವರು ಈ ತಿಂಗಳ 31ರೊಳಗೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ(ಆಧಾರ್ ಆಧಾರಿತ ಹೆಬ್ಬೆಟ್ಟಿನ ದೃಢೀಕರಣ) ಮಾಡಿಸಲು ತಿಳಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ ಇ-ಕೆವೈಸಿ ಕಾರ್ಯ ಶೇ. 96.89 ಮುಕ್ತಾಯಗೊಂಡಿದ್ದು, ಕೆವೈಸಿ ಆಗದೇ ಇರುವವರ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಪ್ರದರ್ಶಿಸಲಾಗಿರುತ್ತದೆ. ನಿಗದಿಪಡಿಸಿದ ದಿನಾಂಕದೊಳಗೆ ಇ-ಕೆವೈಸಿ ಮಾಡಿಸದಿದ್ದಲ್ಲಿ ಅಂತಹವರ ಹೆಸರನ್ನು ಬಿಪಿಎಲ್ ಪಡಿತರ ಚೀಟಿಯಿಂದ ತೆಗೆದು ಹಾಕಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಸರ್ಕಾರದ ಮಾನದಂಡಗಳನ್ವಯ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಇರುವುದು ಹಾಗೂ ಅನರ್ಹ ಪಡಿತರ ಚೀಟಿ ಪಡೆದಿರುವುದು ಕಾನೂನಿಗೆ ವಿರುದ್ಧವಾಗಿರುತ್ತದೆ. ಆದ್ದರಿಂದ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಪಡೆದುಕೊಂಡಿರುವುವವರು ಮತ್ತು ಆರ್ಥಿಕವಾಗಿ ಸಬಲರಾಗಿದ್ದು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವವರು ಕೂಡಲೇ ತಾಲೂಕು ಕಚೇರಿ/ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ತಮ್ಮ ಪಡಿತರ ಚೀಟಿ ಹಿಂದಿರುಗಿಸಲು ತಿಳಿಸಿದೆ.