

ಕೋಲಾರ: ಜಿಲ್ಲಾಡಳಿತದಿಂದ ಆ.15ರಂದು ನಗರದಲ್ಲಿ ಆಚರಿಸಲಿರುವ ಸ್ವಾತಂತ್ರ$್ಯ ದಿನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಂಗಳಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಸ್ವಾತಂತ್ರ್ಯೋತ್ಸವಕ್ಕಿಂತ ಈ ಬಾರಿ ಅದ್ದೂರಿಯಾಗಿ ಆಚರಿಸಲು ರಚಿಸಲಾಗುವ ವಿವಿಧ ಸಮಿತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಕಾರ್ಯಕ್ರಮ ನಡೆಯಲಿರುವ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣ ಶುಚಿಗೊಳಿಸಬೇಕು. ಸಾರ್ವಜನಿಕರು, ಗಣ್ಯರು, ಮಕ್ಕಳಿಗೆ ಆಸನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಆಕರ್ಷಕ ಪಥ ಸಂಚಲನಕ್ಕಾಗಿ ಉತ್ತಮ ತಂಡಗಳನ್ನು ಆಯ್ಕೆ ಮಾಡಬೇಕು. ಶಾಲಾ ಮಕ್ಕಳನ್ನು ಕವಾಯತು ನೀಡಲು ಸಜ್ಜುಗೊಳಿಸಬೇಕು. ಕ್ರೀಡಾಂಗಣದಲ್ಲಿ ತಾಲೀಮು ನಡೆಸುವ ವೇಳೆ ಕುಡಿಯುವ ನೀರು ಮತ್ತು ಉಪಹಾರ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮದಂದು ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ಆರೋಗ್ಯ ಇಲಾಖೆಯಿಂದ ಕ್ರೀಡಾಂಗಣದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಜತೆಗೆ ವೈದ್ಯಕಿಯ ಸಿಬ್ಬಂದಿ ಸಿದ್ಧರಿರಬೇಕು ಎಂದರು.
ಕಾರ್ಯಕ್ರಮಕ್ಕೆ ಬರುವ ಮುನ್ನ ಶಾಲಾ ಮಕ್ಕಳಿಗೆ ಸಂಬಂಧಪಟ್ಟ ಶಾಲೆಗಳಲ್ಲಿ ಉಪಾಹಾರದ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ ಭವನ ಸೇರಿ ಎಲ್ಲಾ ಇಲಾಖೆಗಳ ಕಟ್ಟಡಗಳು ವಿದ್ಯುತ್ ದೀಪದಿಂದ ಅಲಂಕಾರಗೊಂಡಿರಬೇಕು. ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.
ದೇಶಕ್ಕಾಗಿ ಮಡಿದ ವೀರ ಯೋಧರ ಕುಟುಂಬದವರನ್ನು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಜಿಲ್ಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಾಂಸತಿಕ ಹಾಗೂ ಪಥ ಸಂಚಲನಕ್ಕೆ ಮಕ್ಕಳ ತಂಡ ಆಯ್ಕೆ ಮಾಡುವಾಗ ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಬೇಕು. ಅಂದು ಸಂಜೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಯಲಿರುವ ಸಾಂಸತಿಕ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸತಿ ಇಲಾಖೆ ವಹಿಸಿಕೊಂಡು ಆಯೋಜಿಸಬೇಕು ಎಂದರು.
ಕೃಷಿ ಜಂಟಿ ನಿರ್ದೇಶಕಿ ಸುಮಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಸೇರಿ ಜಿಲ್ಲಾಮಟ್ಟದ ಇನ್ನಿತರ ಅಧಿಕಾರಿಗಳು ಸಭೆಯಲ್ಲಿದ್ದರು.
ಸಾರ್ವಜನಿಕರೇ ಭಾಗವಹಿಸಿ
ಶಾಲಾ&ಕಾಲೇಜು ಹಾಗೂ ಜಿಲ್ಲಾಡಳಿತ ಭವನದಿಂದ ಹೊರಗೆ ಇರುವ ಬೇರೆ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸ್ವಾತಂತ್ರೋತ್ಸವ ಆಚರಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ನಾಗರಿಕರು ಸ್ವಯಂಪ್ರೇರಣೆಯಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಮಂಗಳಾ ಮನವಿ ಮಾಡಿದರು.