

ಬೆಂಗಳೂರು ಗ್ರಾಮಾಂತರ: ಮೀನುಗಾರಿಕೆ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ ಮೂಲಕ ಕ್ರಾಂತಿ ತರುವ ಮತ್ಸೃ ಸಂಪದ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಜಿಲ್ಲಾ ಮೀನುಗಾರಿಕೆ ಇಲಾಖೆಗೆ ಮೀನುಖಾದ್ಯ ಮಳಿಗೆ ಹಾಗೂ ಅಲಂಕಾರಿಕ ಮೀನು ಉತ್ಪಾದನಾ ಘಟಕಗಳ ಸ್ಥಾಪನೆಗೆ ಜಿಲ್ಲಾಡಳಿತದಿಂದ ಹಸಿರು ನಿಶಾನೆ ದೊರೆತಿದೆ.
ಜಿಲ್ಲೆಯಲ್ಲಿ ಅಧಿಕೃತ ಮೀನು ಕೃಷಿ ಕೊಳಗಳ ನಿರ್ಮಾಣಕ್ಕೆ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಅಧಿಕೃತವಾಗಿ ಆಹಾರಯೋಗ್ಯ ಮೀನು ಸಾಕಣೆಗೆ ಅವಕಾಶ ಕಲ್ಪಿಸಲಾಗಿದೆ.
ಹೊಂಡಗಳ ಪುನಃಬಳಕೆಗೆ ಚಿಂತನೆ: ನಿಷೇಧಿತ ಕ್ಯಾಟ್‌ಫಿಷ್ ಸಾಕಣೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಎಲ್ಲ ಕಡೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಜಿಲ್ಲೆಯಲ್ಲಿ ಕ್ಯಾಟ್‌ಪಿಷ್ ದಂಧೆಗೆ ಅಂಕುಶ ಹಾಕಿತ್ತು. ಆದರೆ ಈಗ ಇದೇ ಹೊಂಡಗಳಲ್ಲಿ ಸರ್ಕಾರದ ಪರವಾನಗಿ ಪಡೆದು ಮೀನುಸಾಕಣೆಗೆ ಸ್ಥಳೀಯರು ಮುಂದೆ ಬಂದಿದ್ದಾರೆ. ಇಂಥವರನ್ನು ಈ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಇಲಾಖೆಯೂ ನೆರವಿಗೆ ನಿಂತಿದೆ.
ಜಿಲ್ಲಾಧಿಕಾರಿ ಸೂಚನೆ: ಜಿಲ್ಲೆಯಲ್ಲಿ ಮೀನು ಕೃಷಿ ಕೊಳ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯ ಪ್ರತಿ ತಾಲೂಕಿಗೆ ಒಂದರಂತೆ ಮೀನು ಖಾದ್ಯ ಮಳಿಗೆ ಹಾಗೂ ಅಲಂಕಾರಿಕ ಮೀನು ಉತ್ಪಾದನಾ ಘಟಕ ಸ್ಥಾಪಿಸುವಂತೆ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದ್ದಾರೆ.
ಇತ್ತೀಚಿಗೆ ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಮತ್ಸ್ಯ ಸಂಪದ ಕ್ರಿಯಾ ಯೋಜನೆ ಸಮಿತಿ ಸಭೆಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೃಷಿಯೊಂದಿಗೆ ಮೀನುಕೃಷಿಗೂ ಉತ್ತೇಜನ ದೊರಕಬೇಕು. ಇದರಿಂದ ಸ್ಥಳೀಯವಾಗಿ ಸಾಕಷ್ಟು ಉದ್ಯೋಗಾವಕಾಶ ದೊರಕಿಸಿಕೊಟ್ಟಂತಾಗುತ್ತದೆ. ಅಲ್ಲದೆ ಸ್ವಯಂ ಉದ್ಯೋಗಕ್ಕೆ ಒತ್ತು ನೀಡಿ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದ್ದರು.
ಅಧಿಕಾರಿ ತಂಡ ರಚನೆ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಕ್ರಿಯಾಯೋಜನೆ ಸಮಿತಿ ಸಮಿತಿ ಸದಸ್ಯರಾಗಿ ಕೆ.ವಿ.ಕೆ.ಹಾಡೋನಹಳ್ಳಿ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ, ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಶಿವಕುಮಾರ್ ಮಗದ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಧುಸೂದನ್, ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿ ತಂಡ ಈ ಯೋಜನೆ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿದೆ.
ಜಿಲ್ಲಾಧಿಕಾರಿ ಅನುಮೋದನೆ: 50 ಟನ್ ಸಾಮರ್ಥ್ಯದ 1 ಐಸ್ ಕಾರ್ಖಾನೆ, 50 ಟನ್ ಸಾಮರ್ಥ್ಯದ ಶೀತಲಗೃಹ, 10 ಆರ್‌ಎಎಸ್ ಘಟಕ ಹಾಗೂ ಮೀನು ಕೃಷಿ ಕೊಳ ನಿರ್ಮಿಸಲು 2020-21ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಕ್ರಿಯಾ ಯೋಜನೆಗೆ 6,73 ಕೋಟಿ ರೂ.ಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ.
ಒಂದು ವರ್ಷದ ಗುರಿ ನಿಗದಿಪಡಿಸಿದ್ದು, ಈ ಕಾಲಾವಧಿಯೊಳಗೆ ಮೀನುಕೃಷಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ. ಮತ್ಸ್ಯ ಸಂಪದ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತಿದೆ. ಪಿ.ಎನ್.ರವೀಂದ್ರ ಜಿಲ್ಲಾಧಿಕಾರಿ