ಜಿಲ್ಲಾಡಳಿತದಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಣೆ -ಹಿರಿಯರನ್ನು ಕಡೆಗಣಿಸುವುದು ಸರಿಯಲ್ಲ- ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿಕೆ

raichur
raichur
Published on

ರಾಯಚೂರು ಇತ್ತೀಚಿನ ದಿನಮಾನಗಳಲ್ಲಿ ಒತ್ತಡದ ಜೀವನ, ಆರ್ಥಿಕ ಪರಿಸ್ಥಿತಿಯಿಂದ ಸಮಾಜದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ತಂದೆ ತಾಯಿಯರ ಜತೆಗೆ ಬಾಳುವ ಅದೃಷ್ಟವಿಲ್ಲದೇ ಅವರ ಮಧ್ಯೆ ಇದ್ದ ಕೊಂಡಿಗಳು ಕಳಚಿ ಹೋಗುತ್ತಿವೆಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಕಳವಳ ವ್ಯಕ್ತ ಪಡಿಸಿದರು.

ನಗರದ ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಿರಿಯರ ಮಾರ್ಗದರ್ಶ ನವಿಲ್ಲದೇ ಇದ್ದಲ್ಲಿ ಸಾಮಾಜಿಕ ಸ್ವಾಸ್ತ್ರ ಹಾಳಾಗುತ್ತದೆ. ತಂದೆ ತಾಯಿಯರು ಮಕ್ಕಳ ಜತೆಗೆ ಇದ್ದರೆ ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯವಾಗಿದೆ. ಜೀವನದಲ್ಲಿ ತೃಪ್ತಿ ಪ್ರಾಪ್ತಿಯಾಗಲು ಸಾಧ್ಯವಾಗುತ್ತದೆ ಎಂದರು.

ಹಿಂದಿನ ನಮ್ಮ ಹಿರಿಯರು ಅನುಭವಿಸಿದ ಕಷ್ಟಗಳನ್ನು ಈಗಿನ ಯುವ ಪೀಳಿಗೆ ಮತ್ತು ಮುಂದಿನ ಪೀಳಿಗೆ ಅನುಭವಿಸಲು ಸಾಧ್ಯವಿಲ್ಲ. ತಂದೆ, ತಾಯಿಯರ ಜತೆಗೆ ಇದ್ದರೆ ಆ ಕಷ್ಟಗಳನ್ನು ಎದುರಿಸುವ ದೈರ್ಯವಾದರೂ ಬರುತ್ತದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕರಿಗಾಗಿ ಭವನವನ್ನು ನಿರ್ಮಾಣ ಮಾಡುವ ಉದ್ದೇಶವಿದ್ದು, ನಗರದಲ್ಲಿ ಉತ್ತಮ ಸ್ಥಳಾವಕಾಶವನ್ನು ನೋಡಿಕೊಂಡು, ಮುಂದಿನ ದಿನಗಳಲ್ಲಿ ಹಿರಿಯರಿಗೆ ಕಾಲ ಕಳೆಯಲು ಉತ್ತಮವಾದ ವಾತವರಣವನ್ನು ಸೃಷ್ಟಿ ಮಾಡಲಾಗುವುದು ಎಂದರು.

ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತ ಗಜಾನನ ಬಾಳೆ ಮಾತನಾಡಿ, ಇತ್ತಿಚ್ಚಿಗೆ ಹಿರಿಯರನ್ನು ಕೀಳಾಗಿ ನೋಡಲಾಗುತ್ತದೆ. ಹಿರಿಯರನ್ನು ಕಡೆಗಣಿಸಿದರೆ ಅಂತವರ ವಿರುದ್ದ ಹಿರಿಯ ನಾಗರಿಕರ ಕಾಯ್ದೆ 2007ರ ಅಡಿಯಲ್ಲಿ ಶಿಕ್ಷೆ ನೀಡಬಹುದಾಗಿದೆ. ಹಿರಿಯ ನಾಗರಿಕರನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಅನೇಕ ಕ್ಷೇತ್ರಗಳ್ಲಿ ಸಾಧನೆಗೈದ ಹಿರಿಯ ನಾಗರಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕ್ರೀಡೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಶರಣಮ್ಮ, ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀ ದೇವಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಮುಖ್ಯಸ್ಥ ಪವನ್ ಕಿಶೋರ್ ಪಾಟೀಲ್, ಮಹಾದೇವಪ್ಪ, ರಾಮಣ್ಣ ಸೇರಿದಂತೆ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net