

ರಾಯಚೂರು ವಾಲ್ಮೀಕಿ ರಾಮಾಯಣ ಗ್ರಂಥವನ್ನು ರಚಿಸಿ ದೇಶ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಮಾದರಿಯಾಗಿದ್ದಾರೆ. ರಾಮಾಯಣದ ಮೂಲಕ ಮನುಕುಲಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಪ್ರತಿಯೊಬ್ಬರೂ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂಸದ ಜಿ.ಕುಮಾರ್ ನಾಯಕ ತಿಳಿಸಿದರು.
ನಗರದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ , ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮುದಾಯದವರಲ್ಲ, ಇಡೀ ದೇಶದವರಾದ ಮಹಾನ ವ್ಯಕ್ತಿ. ಭಾರತೀಯ ಸಂಸ್ಕೃತಿಗೆ ಸಂವಿಧಾನವನ್ನು ನೀಡಿದವರು, ರಾಮಾಯಣದ ಮೂಲಕ ರಾಜ, ಮಂತ್ರಿ ಹಾಗೂ ಪ್ರಜೆಗಳ ಕರ್ತವ್ಯವನ್ನು ವಿವರಿಸಿದವರು. ಹಳೆಯದನ್ನು ಮರೆಯಬಾರದು, ಅದನ್ನೆ ನೆನಪಿಟ್ಟು ಆಧುನಿಕತೆಗೆ ತೊಡಗಿಸಿಕೊಳ್ಳಬೇಕು. ಎಲ್ಲರೂ ಒಂದೇ ಜನಾಂಗವಾಗಿ ಸಮಾಜದ ಉನ್ನತಿಗಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ಸಹಕಾರ ಮತ್ತು ಸಲಹೆ ಅತ್ಯಂತ ಮುಖ್ಯ. ಶಿಕ್ಷಣದ ಮೂಲಕ ಉನ್ನತ ಸ್ಥಾನಕ್ಕೆ ತಲುಪುವ ದೃಢ ಸಂಕಲ್ಪ ಎಲ್ಲರಲ್ಲಿರಬೇಕು ಎಂದರು.
ಪರಿಶಿಷ್ಟ ವರ್ಗದ ಮಕ್ಕಳಿಗೆ ದೇಶಾದ್ಯಂತ 150 ಕೋಟಿಗೂ ಹೆಚ್ಚು ಅನುದಾನ ಬೇಕಿತ್ತು, ಆದರೆ ಕೆಲವೇ ಲಕ್ಷ ಮಾತ್ರ ನೀಡಲಾಗಿತ್ತು. ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಮನವಿಯ ಮೇರೆಗೆ ವಿಷಯ ನನ್ನ ಗಮನಕ್ಕೆ ಬಂದ ನಂತರ ಈಗ 120 ಕೋಟಿ ರೂ. ಅನುದಾನ ಮಂಜೂರಾಗಿದೆ. ರಾಯಚೂರಿನ ವಾಲ್ಮೀಕಿ ಭವನದ ಅಭಿವೃದ್ಧಿಗೆ 50 ಲಕ್ಷ ರೂ. ಸಂಸದರ ಅನುದಾನದಿಂದ ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿಕೊಂಡ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಗತ್ತಿನ ಮೊದಲ ಕವಿ. ಸುಮಾರು 12 ಸಾವಿರ ವರ್ಷಗಳ ಹಿಂದೆ ರಾಮಾಯಣ ಬರೆದು ಸಂಬಂಧಗಳ ಮಹತ್ವವನ್ನು ತಿಳಿಸಿಕೊಟ್ಟರು. ರಾಯಚೂರು ಭಾಗದಲ್ಲೂ ಪರಿಶಿಷ್ಟ ವರ್ಗದ ಜನರ ಕೊಡುಗೆ ಅಪಾರವಾಗಿದೆ. ವಾಲ್ಮೀಕಿ ಅವರ ಥ್ವಾದರ್ಶಗಳಿಂದ ಸಮಾಜದಲ್ಲಿ ಸಮಾನತೆ ನೆಲೆಸಬೇಕು. ವಾಲ್ಮೀಕಿ ಭವನದಲ್ಲಿ ಸುಸಜ್ಜಿತ ವ್ಯವಸ್ಥೆಯನ್ನು ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಸುರಪುರದ ವಿಶ್ರಾಂತ ಪ್ರಾಂಶುಪಾಲ ಪ್ರೋ.ಜೆ.ವೇಣುಗೋಪಾಲ ನಾಯಕ ಉಪನ್ಯಾಸ ನೀಡಿ , ವಾಲ್ಮೀಕಿ ಸಮಾಜವು
ರಾಜ್ಯದಲ್ಲಿ ಮೂರನೇ ದೊಡ್ಡ ಸಮಾಜವಾದಿದ್ದು, ಸಮಾಜದ ಮುಖಂಡರು ಒಗ್ಗಟ್ಟಾಗಿರಬೇಕು ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅಲ್ಲದೆ ರಾಜಕೀಯವಾಗಿ ಎಲ್ಲರೂ ಸಂಘಟಿತರಾಗಬೇಕು ಎಂದರು.
ಮಹರ್ಷಿ ವಾಲ್ಮೀಕಿ ಅವರನ್ನು ನಾವೇಲ್ಲರೂ ಸ್ವಾಭಿಮಾನದ ಪ್ರತೀಕವಾಗಿ ಸ್ವೀಕರಿಸಬೇಕು. ವಾಲ್ಮೀಕಿ ಇಡೀ ವಿಶ್ವಕ್ಕೆ ರಾಮಾಯಣ ಮಹಾಕಾವ್ಯ ನೀಡಿ, ಸರ್ವಧರ್ಮಿಯರಿಗೂ ಪೂಜ್ಯರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರ ಜೀವನದ ಪಾಠವು ನಮ್ಮ ಬದುಕಿನ ಬದಲಾವಣೆಗೆ ನಾಂದಿ ಆಗಬೇಕು ಎಂದರು.
ಇದೇ ವೇಳೆ ನಿತೀಶ್ ಕೆ.ಭಾರತ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಿದರು.
ನಂತರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಮುಖಂಡರಿಗೆ ವಿವಿಧ ಗಣ್ಯರಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ಪಿ ಪುಟ್ಟಮಾದಯ್ಯ ಎಂ., ಎಎಸ್ಪಿ ಕುಮಾರಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಸಮಾಜದ ಮುಖಂಡರಾದ ತಾಯಣ್ಣ ನಾಯಕ, ಮಾರಪ್ಪ ಬುದ್ದಿನ್ನಿ, ರಾಜಾ ಪಾಂಡುರಂಗ ನಾಯಕ, ಭೀಮರಾಯ ನಾಯಕ, ವೆಂಕಟೇಶ ನಾಯಕ, ರಘುವೀರ ನಾಯಕ, ನಾರಾಯಣ ನಾಯಕ, ಶಿವಪ್ಪ ನಾಯಕ, ಮಲ್ಲಿಕಾರ್ಜುನ ನಾಯಕ, ವೆಂಕಟೇಶ ಹಾಸ್ಕಿಹಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.