ಜಿಲ್ಲಾಡಳಿತದಿಂದ ರಾಣಿ ಚನ್ನಮ್ಮ ಜಯಂತಿ ಆಚರಣೆ, ಚನ್ನಮ್ಮಾಜಿಯ ಜೀವನಾದರ್ಶ ಸ್ಪೂರ್ತಿದಾಯಕ ಎಂದ ಡಿಸಿ ಡಾ.ಆನಂದ ಕೆ

CHANNAMMA JAYANTI DC OFFICE
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಕಿತ್ತೂರ ರಾಣಿ ಚನ್ನಮ್ಮ ಜಯಂತಿ ಆಚರಣೆ ಹಿನ್ನೆಲೆ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಪಂ ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
Published on

ವಿಜಯಪುರ: ಆಂಗ್ಲರ ವಿರುದ್ಧ ಹೋರಾಡಿ ಜಯ ಸಾಧಿಸಿದ ಕಿತ್ತೂರಿನ ರಾಣಿ ಚನ್ನಮ್ಮರ ಜೀವನಾದರ್ಶ ಇಂದಿನ ಮಹಿಳೆಯರಿಗೆ ಸ್ಪೂರ್ತಿದಾಯಕ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರ ರಾಣಿ ಚನ್ನಮ್ಮ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರೃಕ್ಕಾಗಿ ಹೋರಾಡಿದ ಮಹನೀಯರಲ್ಲಿ ಚನ್ನಮ್ಮಗೆ ಅಗ್ರ ಸ್ಥಾನವಿದೆ. ಅವರ ಸಾಹಸಮಯ ಜೀವನ ಎಲ್ಲರಿಗೂ ಸ್ಪೂರ್ತಿದಾಯಕ. ಅನೇಕ ಕಷ್ಟಗಳು ಎದುರಾದಾಗಲೂ ಕುಗ್ಗದೆ ಬ್ರಿಟಿಷರ ವಿರುದ್ಧ ಹೋರಾಡಿ ಸಾಹಸ ಮೆರೆದವರು ರಾಣಿ ಚನ್ನಮ್ಮ. ಅತ್ಯಂತ ಕಷ್ಟಕರ ಹಾಗೂ ಕ್ಲಿಷ್ಟಕರ ಸಂದರ್ಭವನ್ನೂ ಮೆಟ್ಟಿ ನಿಂತು ಅದನ್ನು ನಿಭಾಯಿಸುವ ಛಾತಿ-ಧೈರ್ಯ ಇಂದಿನ ಯುವ ಜನಾಂಗ ರೂಢಿಸಿಕೊಳ್ಳಲು ಕಿತ್ತೂರ ರಾಣಿ ಚನ್ನಮ್ಮ ಅವರ ಜೀವನ ಸೂರ್ತಿಯ ಸೆಲೆಯಾಗಿದೆ ಎಂದರು.

ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಚನ್ನಮ್ಮಾಜಿ ತೋರಿದ ಧೈರ್ಯ, ಶೌರ್ಯ ಹಾಗೂ ಸಾಹಸ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಅವರ ಸಾಹಸಮಯ ಯಶೋಗಾಥೆಯನ್ನು ಮುಂದಿನ ಜನಾಂಗಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಭಾಷಣ, ಕ್ವಿಜ್, ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಅವರ ಆದರ್ಶಮಯ ಜೀವನ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದರು.

ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಕಿತ್ತೂರ ರಾಣಿ ಚನ್ನಮ್ಮ ಬ್ರಿಟಿಷ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನವಾಗಿದ್ದರು. ಅವರ ಸಾಹಸ, ಜೀವನ, ಛಲ, ದೃಢ ನಿರ್ಧಾರ ಮಹಿಳೆಯರಿಗೆ ಪ್ರೇರಣೆಯಾಗಿವೆ ಎಂದರು.

ಪ್ರಕಾಶ ಎನ್. ನರಗುಂದ ಅವರು ಉಪನ್ಯಾಸ ನೀಡುತ್ತಾ, 1778 ಅ.23ರಂದು ಬೆಳಗಾವಿಯ ಕಾಕತಿಯಲ್ಲಿ ಜನಿಸಿದ ಕಿತ್ತೂರ ರಾಣಿ ಚನ್ನಮ್ಮ ಅವರು ತಂದೆ ಧೂಳಪ್ಪಗೌಡರಿಂದ ಯುದ್ಧ ಪರಿಣಿತಿಯನ್ನು ಕರಗತ ಮಾಡಿಕೊಂಡಿದ್ದರು. ನಾಡಿನ ರಕ್ಷಣೆಗಾಗಿ ಪರಕೀಯರ ದಾಸ್ಯದ ವಿರುದ್ಧ ಹೋರಾಡಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದ್ದಾರೆ. ಲಾವಣಿ, ಜನಪದ ನಾಟಕಗಳ ಮೂಲಕ ಇವರ ಯಶೋಗಾಥೆ ಹಾಗೂ ಹೋರಾಟದ ಬದುಕಿ ಚಿತ್ರಣ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು.

ಬಿ.ಎಂ. ಪಾಟೀಲ ಮಾತನಾಡಿ, ಚನ್ನಮ್ಮ ಅವರು ಬಾಲ್ಯದಿಂದಲೇ ಬಿಲ್ವಿದ್ಯೆ, ಕುದುರೆ ಸವಾರಿ, ಕತ್ತಿವರಸೆಯಂತಹ ಸಮರಕಲೆಗಳ ಬಗ್ಗೆ ತಿಳಿದುಕೊಂಡಿದ್ದರು. ತಾಯ್ನಡಿನ ರಕ್ಷಣೆಗೆ ಬ್ರಿಟಿಷರು ನೀಡಿದ ಸಂಕಷ್ಟದ ಸರಮಾಲೆಗಳನ್ನು ದಿಟ್ಟತನದಿಂದ ಎದುರಿಸಿ ಹೋರಾಡಿದ ಧೀರ ಮಹಿಳೆ. ದೇಶ ರಕ್ಷಣೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟು ಹಗಲಿರುಳು ದುಡಿದ ಮಹನೀಯರ ಸ್ಮರಣೆ ಹಾಗೂ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ಎಎಸ್‌ಪಿ ರಾಮನಗೌಡ ಹಟ್ಟಿ, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ, ಪಾಲಿಕೆಯ ಆರೋಗ್ಯಾಧಿಕಾರಿ ಸಂಗಣ್ಣ ಲಕ್ಕಣ್ಣವರ, ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಘೋಣಸಗಿ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶೇಡಶ್ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುಖಂಡರಾದ ಬಿ.ಎಸ್.ಪಾಟೀಲ, ಬಿ.ಎಸ್. ಬಿರಾದಾರ, ಎನ್.ಎಂ. ಬಿರಾದಾರ, ಗುರುಶಾಂತ ನಿಡೋಣಿ ಮತ್ತಿತರರಿದ್ದರು.

ಗೀತಾ ಕುಲಕರ್ಣಿ ಅವರು ಸುಗಮ ಸಂಗೀತ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net