

ರಾಯಚೂರು ಕಾಯಕ ನಿಷ್ಠೆಯಲ್ಲಿ ನುಲಿಯ ಚಂದಯ್ಯ ಶರಣರು ಅನೇಕ ವಚನಗಳ ಮೂಲಕ ಸಮಾಜದ ಬದಲಾವಣೆ ತಂದಿದ್ದಾರೆ. ಅಂತಹ ಶರಣರ ತತ್ವ ಸಿದ್ದಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದ ಕಾಲಘಟ್ಟದಲ್ಲಿ ಕಾಯಕದಲ್ಲಿ ಕೈಲಾಸ ಕಂಡ ಮಹಾನ್ ಶರಣರು, ನುಲಿಯ ಚಂದಯ್ಯನವರಾಗಿದ್ದು, ಲಿಂಗ ನಿಷ್ಠೆಗಿಂತ ಕಾಯಕ ನಿಷ್ಠೆ ಮೇಲು, ತನು ಮನ ಧನದಿಂದ ವಚನ ಸಾಹಿತ್ಯಕ್ಕೆ ಶ್ರಮಿಸಿದ್ದಾರೆ ಎಂದರು.
ನುಲಿಯ ಚಂದಯ್ಯ ಅವರಿಗೆ ಕಾಯಕವೇ ಶ್ರೇಷ್ಠವಾಗಿತ್ತು. ಕಾಯಕದ ಜತೆಗೆ ಅನೇಕ ವಚನಗಳನ್ನು ರಚನೆ ಮಾಡಿದ್ದಾರೆ, ಕುಳುವ ಜನಾಂಗ ಚಿಕ್ಕ ಸಮಾಜವಾಗಿದ್ದು ಯಾವುದೇ ಸೌಕರ್ಯಗಳಿಲ್ಲದೆ ಜೀವನ ನಡೆಸಿದವ ಸಮಾಜವಾಗಿದೆ. ಸೌಕರ್ಯಗಳನ್ನು ಹೋರಾಟ ಮಾಡುವ ಮೂಲಕ ಪಡೆದುಕೊಳ್ಳುವ ಅನಿವಾರ್ಯತೆಯಿದ್ದು, ಸಮಾಜದವರು ಒಗ್ಗಟಾಗಿ ಹೋರಾಟ ಮಾಡಬೇಕಾಗಿದೆ.
ಸರ್ಕಾರದ ಸೌಲಭ್ಯ ಪಡೆದುಕೊಂಡು ಮುಂದೆ ಬರಬೇಕಿದೆ ಎಂದರು.
ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ಮಾತನಾಡಿ, ಅನೇಕ ಶರಣರ ಸಾಲಿನಲ್ಲಿ ನುಲಿಯ ಚಂದಯ್ಯ ಅವರು ಕಾಯಕದ ಜತೆಗೆ ಸಾಹಿತ್ಯಕವಾಗಿ ಹಲವಾರು ವಚನಗಳನ್ನು ರಚನೆ ಮಾಡಿದ್ದಾರೆ. ಅವರ ವಚನಗಳು ಸಮಾಜದ ಬದಲಾವಣೆಗೆ ಪೂರಕವಾಗಿದ್ದು, ಕುಳುವ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಸಮಾಜದ ಜನರು ಶಿಕ್ಷಣವನ್ನು ಪಡೆದುಕೊಳ್ಳಬೇಕು, ಶಿಕ್ಷಣ ಪಡೆಯುವುದುರಿಂದ ಸರ್ಕಾರದ ಸೌಲಭ್ಯಗಳು ದೊರೆಯಲು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಕುಳುವ ಮಹಾಸಂಘದ ರಾಜ್ಯ ಸಹ ಕಾರ್ಯದರ್ಶಿ ಹುಲಿಗೆಪ್ಪ ಮಾಣಿಕ್, ನಗರಾಧ್ಯಕ್ಷ ನರಸಿಂಹಲು, ವಿಭಾಗೀಯ ಅಧ್ಯಕ್ಷ ನೀಲಕಂಠಪ್ಪ, ಬೂದೆಪ್ಪ, ಈರಣ್ಣ, ಮಾಲಾ ಭಜಂತ್ರಿ, ಬಸವರಾಜ ಭಜಂತ್ರಿ, ಸೇರಿದಂತೆ ಅನೇಕರು ಇದ್ದರು.