ಜಿಲ್ಲಾಡಳಿತದಿಂದ ಡಿ.ದೇವರಾಜ ಅರಸುರ 110ನೇ ಜಯಂತಿ

raichur
raichur
Published on

ರಾಯಚೂರು ಹಿಂದುಳಿದ ವರ್ಗದವರ ಏಳಿಗೆಗೆ ಕಾಳಜಿ ವಹಿಸಿ ರಾಜ್ಯದಲ್ಲಿ ಮಹತ್ವದ ಬದಲಾವಣೆಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಯು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿಗಳಾಗಿ ದೀರ್ಘಕಾಲ ಆಡಳಿತ ನಡೆಸಿ, ಹಿಂದುಳಿದ ವರ್ಗದವವರನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅರಸು ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಸ್ಟೆಲ್‌ಗಳ ನಿರ್ಮಾಣ ಮತ್ತು ಮೀಸಲಾತಿ ನೀಡಿಕೆಯ ಕ್ರಮಗಳಿಂದಾಗಿ ಇಂದು ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಬರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಓದಿಗೆ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಷಯದ ಸಹ ಪ್ರಾಧ್ಯಾಪಕರಾದ ಡಾ.ಕೆ.ವೆಂಕಟೇಶ ಮಾತನಾಡಿ, ದೇವರಾಜ ಅರಸು ಅವರು 1972 ರಿಂದ 1980ರವರೆಗೆ ಮುಖ್ಯಮಂತ್ರಿಯಾಗಿದ್ದರು. ಹುಣಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅಧಿಕಾರದಲ್ಲಿದ್ದಾಗ ಸಾಮಾಜಿಕ ನ್ಯಾಯದ ಪರವಾಗಿ, ಬಡವರ ಪರವಾಗಿ ಕೆಲಸ ಮಾಡಿದರು. ಮಲ ಹೊರುವ ಪದ್ದತಿ ನಿಲ್ಲಿಸಿ ಜೀತಪದ್ದತಿಗೆ ಮಂಗಳ ಹಾಡಿದರು. ಭೂಸುಧಾರಣೆ ಯೋಜನೆ ಇಡೀ ಜಗತ್ತಿನಲ್ಲಿ ಹೆಸರಾಯಿತು. ಅದಕ್ಕಾಗಿ ನಾವು ಅರಸು ಅವರನ್ನು ಸಾಮಾಜಿಕ ನ್ಯಾಯ ಹರಿಕಾರರೆಂದು ಕರೆಯುತ್ತೇವೆ ಎಂದರು.


ನಂತರ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ವಸತಿ ನಿಲಯ ಹಾಗೂ ವಸತಿ ಶಾಲೆಯ ವಿದ್ಯಾರ್ಥಿಗಳು ಹತ್ತನೇ ತಗರತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿವಿಧ ಗಣ್ಯರು ಸನ್ಮಾನಿಸಿ, ಗೌರವಿಸಿದರು.
ಕಾರ್ಯಕ್ರಮಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದವರೆಗೆ ಅರಸು ಅವರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ,ಎಎಸ್ಪಿ ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ ಕಾಂಬಳೆ, ಹಿಂದುಳಿದ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net