

ವಿಜಯವಾಣಿ ಸುದ್ದಿಜಾಲ ಮಂಡ್ಯ
ಪೊಲೀಸ್ ಪೇದೆ, ಬಿಎಂಟಿಸಿ ನೌಕರ, ಗ್ರಾ.ಪಂ. ಸದಸ್ಯ, ಎರಡು ವರ್ಷದ ಹೆಣ್ಣು ಮಗು ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ 9 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 382ಕ್ಕೆ ಏರಿದೆ.
48, 39, 25, 25, 48, 34 ವರ್ಷದ ಪುರುಷರು, 2 ವರ್ಷದ ಬಾಲಕಿ ಹಾಗೂ 21, 33 ವರ್ಷದ ಮಹಿಳೆಯರು ಸೋಂಕಿತರಲ್ಲಿ ಸೇರಿದ್ದಾರೆ. 34 ವರ್ಷದ ವ್ಯಕ್ತಿಗೆ ಅಂತರ ಜಿಲ್ಲಾ ಪ್ರಯಾಣದಿಂದ ಸೋಂಕು ತಗುಲಿದೆ. ಉಳಿದ 8 ಜನರಲ್ಲಿ ಸೋಂಕಿನ ಗುಣಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢವಾಗಿದೆ.
ಮದ್ದೂರು ತಾಲೂಕಿನ 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ತಾಲೂಕಿನಲ್ಲಿ ಕರೊನಾ ಖಾತೆ ತೆರೆದಿದೆ. ಇದರಲ್ಲಿ ಒಬ್ಬರು ಪೊಲೀಸ್ ಪೇದೆ, ಇಬ್ಬರು ಬುಕ್ ಸ್ಟೋರ್ ಮಾಲೀಕರ ಸಂಬಂಧಿಕರು, ಗ್ರಾ.ಪಂ. ಸದಸ್ಯ ಇದ್ದಾರೆ. ಇವರೆಲ್ಲರಿಗೂ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 14,883 ಜನರ ಗಂಟಲಿನ ದ್ರವ ಸಂಗ್ರಹಿಸಲಾಗಿದ್ದು, 382 ಜನರಲ್ಲಿ ಸೋಂಕು ಧೃಡವಾಗಿದೆ. ಚಿಕಿತ್ಸೆ ಬಳಿಕ 334 ಜನರು ಚೇತರಿಸಿಕೊಂಡಿದ್ದಾರೆ. 561 ಜನರ ಫಲಿತಾಂಶ ಬರಬೇಕಿದೆ. ಹಾಸ್ಟೆಲ್ ಕ್ವಾರಂಟೈನ್‌ನಲ್ಲಿ 165 ಮತ್ತು ಹೋಂ ಕ್ವಾರಂಟೈನ್‌ನಲ್ಲಿ 1066 ಜನರಿದ್ದಾರೆ ಎಂದು ಡಿಸಿ ಡಾ.ಎಂ.ವಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಕ್ಕೆ ಬಂದರೆ ಎಫ್‌ಐಆರ್
ಹೋಂ ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿಗಳು ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಡಿಸಿ ಡಾ.ಎಂ.ವಿ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ವಹಿಸಲು ಮೊಬೈಲ್ ಆ್ಯಪ್ ಮೂಲಕ ಮಾಹಿತಿ ದಾಖಲಿಸಲಾಗುತ್ತದೆ. ಹೀಗಾಗಿ, ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿಗಳು ತಪ್ಪಿಸಿಕೊಂಡಲ್ಲಿ ಹಾಗೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಂತೆಯೆ, ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಆಯಾ ತಾಲೂಕು ಕಚೇರಿಯ ಕಂಟ್ರೋಲ್ ರೂಂ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಆತಂಕದಲ್ಲಿ ಮದ್ದೂರು ಜನತೆ
ವಿಜಯವಾಣಿ ಸುದ್ದಿಜಾಲ ಮದ್ದೂರು
ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದರಿಂದ ಪಟ್ಟಣದಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಪಟ್ಟಣದ ಬುಕ್ ಸ್ಟೋರ್‌ವೊಂದರಲ್ಲಿ ವ್ಯಾಪಾರ ಮಾಡುತ್ತಿದ್ದ ಇಬ್ಬರಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಪ್ರತಿನಿತ್ಯ ಸ್ಟೋರ್‌ಗೆ ಹಲವು ಗ್ರಾಹಕರು ವ್ಯಾಪಾರಕ್ಕೆಂದು ಬಂದು ಹೋಗಿದ್ದಾರೆ. ಜತೆಗೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಬೇಕಾದ ಪರಿಕರಗಳನ್ನು ಖರೀದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಷ್ಟು ಜನರಿಗೆ ಸೋಂಕು ತಗಲಿರಬಹುದು ಎಂಬ ಆತಂಕ ಮನೆ ಮಾಡಿದೆ.
ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ಟೋರ್, ಮನೆ ಹಾಗೂ ಬಡಾವಣೆಯನ್ನು ಸ್ಯಾನಿಟೈಜ್ ಮಾಡಿದ್ದಾರೆ. ಬುಧವಾರ ರಾತ್ರಿಯೇ ಸಮೀಪದ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿ, ಸ್ಟೋರ್ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗಿದೆ.
ಇನ್ನು ಸಂಚಾರ ಪೊಲೀಸ್ ಸಿಬ್ಬಂದಿಗೆ ಕರೊನಾ ಸೋಂಕು ಧೃಡಪಟ್ಟಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮದ್ದೂರು ಸಂಚಾರ ಹಾಗೂ ಪಟ್ಟಣ ಪೊಲೀಸ್ ಠಾಣೆ, ಸಿಪಿಐ ಕಚೇರಿ, ಪೊಲೀಸ್ ವಸತಿಗೃಹವನ್ನು ಸೀಲ್ಡೌನ್ ಮಾಡಲಾಗಿದೆ. ಎಸ್ಪಿ ಕೆ.ಪರಶುರಾಮ, ಎಎಸ್ಪಿ ಶೋಭಾರಾಣಿ, ಡಿವೈಎಸ್ಪಿ ಪೃಥ್ವಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಠಾಣೆ ಸೀಲ್‌ಡೌನ್ ಆಗಿರುವುದರಿಂದ ಪೊಲೀಸ್ ವಸತಿ ಗೃಹದಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ತುರ್ತು ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ಎಸ್ಪಿ ಕೆ.ಪರಶುರಾಮ ತಿಳಿಸಿದ್ದಾರೆ.
ಇನ್ನು ಸೋಂಕಿತ ಪೇದೆ ಹಿರಿಯ ಸಿವಿಲ್ ನ್ಯಾಯಾಲಯದಲ್ಲೂ ಕಾರ್ಯನಿರ್ವಹಿಸಿದ ಕಾರಣ ನ್ಯಾಯಾಲಯದ ಸಿಬ್ಬಂದಿಗೂ ಆತಂಕ ಶುರುವಾಗಿದೆ. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಪೊಲೀಸರು ಸೇರಿದಂತೆ ಹಲವರಿಂದ ಗಂಟಲ ದ್ರವ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗಿದೆ. ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಕಾರಣ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಜನ ಸಂಚಾರ ವಿರಳವಾಗಿತ್ತು.