ವಿಶೇಷ ಚೇತನರಿಗೆ ವೀಲ್ ಚೇರ್ ವಿತರಣೆ

Distribution of wheelchairs to the mentally challenged
Published on

ಮಡಿಕೇರಿ:

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ, ರೋಟರಿ ಮಿಸ್ಟಿಹಿಲ್ಸ್, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಹಾಗೂ ಜಿಲ್ಲಾ ವಿಶೇಷಚೇತನರ ಸಂಘ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲೆಯ ೨೨ ವಿಶೇಷ ಚೇತನರಿಗೆ ವೀಲ್‌ಚೇರ್‌ನ್ನು ಗುರುವಾರ ವಿತರಿಸಲಾಯಿತು.

ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀಲ್‌ಚೇರ್ ವಿತರಿಸಲಾಯಿತು. ೨೫,೪೧೦ ರೂ. ವೆಚ್ಚದ ೧೦ ವೀಲ್‌ಚೇರ್‌ಗಳು ಮತ್ತು ೧೭ ಸಾವಿರ ರೂ. ವೆಚ್ಚದ ೧೯ ವೀಲ್‌ಚೇರ್‌ಗಳನ್ನು ಕೊಡಗು ಮತ್ತು ಹುಣಸೂರು ವಿಭಾಗಕ್ಕೆ ಸೇರಿದ ೨೯ ವಿಶೇಷಚೇತನರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಜೆ. ವಿಮಲಾ ಸರ್ಕಾರದ ಜತೆಗೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ವಿಶೇಷಚೇತನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ೬,೪೦೦ ವಿಶೇಷಚೇತನರಿಗೆ ಗುರುತಿನ ಚೀಟಿ ವಿತರಿಸಲಾಗಿದ್ದು, ಸರ್ಕಾರದಿಂದ ವಿಶೇಷಚೇತನರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿAದ ಉತ್ತಮ ಗುಣಮಟ್ಟದ ವೀಲ್‌ಚೇರ್‌ಗಳನ್ನು ವಿತರಿಸಲಾಗುತ್ತದೆ. ಇಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಇತರರಂತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ರೆಡ್‌ಕ್ರಾಸ್ ಸಂಸ್ಥೆಯು ಅಗತ್ಯ ಸಹಕಾರ ನೀಡಲಿದೆ. ಹಲವು ಕಾರಣಗಳಿಂದ ಮನುಷ್ಯರಲ್ಲಿ ವಿಕಲತೆ ಉಂಟಾಗುತ್ತದೆ. ಆದ್ದರಿಂದ ಧೃತಿಗೆಡದೆ ಬದುಕು ಸವೆಸಬೇಕು. ಸವಾಲುಗಳನ್ನು ಎದುರಿಸಬೇಕು ಎಂದು ಹೇಳಿದರು.

ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ರತ್ನಾಕರ ರೈ ಮಾತನಾಡಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ವಿಶೇಷಚೇತನರಿಗೆ ಕೈಲಾದಷ್ಟು ಅಗತ್ಯ ಸಹಕಾರ ಕಲ್ಪಿಸಲಾಗುತ್ತದೆ. ಆ ನಿಟ್ಟಿನಲ್ಲಿ ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.
ವಿಶೇಷಚೇತನರ ಜಿಲ್ಲಾ ಸಂಘದ ಅಧ್ಯಕ್ಷರಾದ ಮಹೇಶ್ವರ್ ಮಾತನಾಡಿ ವೀಲ್‌ಚೇರ್‌ಗಳನ್ನು ಪಡೆದು ಮೂಲೆಗೆ ಎಸೆಯಬಾರದು. ಇಂತಹ ಸಾಧನ ಸಲಕರಣೆಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ಬದುಕುದೂಡಲು ಪ್ರಯತ್ನಿಸಬೇಕು ಎಂದರು.

ಸ್ವಾಮಿ ವಿವೇಕಾನಂದ ಯೂತ್ ಮೂವೆಮೆಂಟ್‌ನ ಖಜಾಂಜಿ ಡಾ.ಕೆ.ಎನ್.ಚಂದ್ರಶೇಖರ್ ಮಾತನಾಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ಮುರಳಿಧರ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಬೋರಯ್ಯ, ವೆಂಕಚಾರಿ, ಅಭಿಷೇಕ್, ಸುನಿತಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net