

ಮೈಸೂರು: ಸೆಸ್ಕ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮಂಗಳವಾರ ಸಂಜೆ ಬಲೂನ್ ಅನಾವರಣ ಹಾಗೂ ಜಾಥಾ ಕಾರ್ಯಕ್ರಮದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು, ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರು ಮತದಾನ ಮಾಡಲು ಮುಂದೆ ಬರುವಂತೆ ಮಾಡಲು ಇಂದಿನಿಂದ ಮತದಾರರ ಮಾಹಿತಿ ಚೀಟಿಯನ್ನು ಹಂಚಲಾಗುವುದು ಎಂದು ತಿಳಿಸಿದರು.
ಇದರಿಂದ ಮತದಾರರು ಆ ಚೀಟಿಯ ಹಿಂಭಾಗದಲ್ಲಿರುವ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತಮ್ಮ ಮತಗಟ್ಟೆ ಮಾಹಿತಿಯನ್ನು ಪಡೆಯಬಹುದು ಎಂದರು.
ಬೂತ್ ಮಟ್ಟದ ಅಧಿಕಾರಿಗಳಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ಹಂಚಿಕೆ ಮಾಡಿಸಲಾಗುತ್ತದೆ. ಮತದಾನ ಮಾರ್ಗದರ್ಶಿಗಳಿಂದ ಅವರಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಚುನಾವಣೆಯನ್ನು ಯಶಸ್ವಿಗೊಳಿಸಲು ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸಲು ಸೆಸ್ಕ್‌ನವರು ನಮ್ಮೊಂದಿಗೆ ಸೇರಿ ತಮ್ಮ ಸಿಬ್ಬಂದಿಯಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ತಲುಪುವಂತೆ ಮಾಡಬೇಕು. ಆಗ ಮಾತ್ರವೇ ನಮ್ಮ ಉದ್ದೇಶ ಸಫಲವಾಗುವುದು ಎಂದರು.
ಜಿಲ್ಲಾ ಸ್ವೀಪ್ ಸಮಿತಿಯು ಚುನಾವಣೆಯನ್ನು ಯಶಸ್ವಿಯಾಗಿಸಲು ಗ್ರಾಮ, ತಾಲೂಕು ಹಾಗೂ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಮೂಲಕ ಮತದಾರರಲ್ಲಿ ನೈತಿಕ ಮತದಾನ ಮಾಡಲು ಪ್ರೇರೇಪಿಸುತ್ತಿದೆ ಎಂದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ಮಾತನಾಡಿ, ಹಿಂದೆಂದೂ ಆಗಿರದಷ್ಟು ಮತದಾನವನ್ನು ಈ ಬಾರಿಯ ಚುನಾವಣೆಯಲ್ಲಿ ಆಗುವಂತೆ ಮಾಡಬೇಕು. ಅದು ಹೇಗೆ ಎಂದರೆ ದಿನದ 24 ಗಂಟೆಗಳು ಜನರ ಮುಂದೆ ಮತದಾನದ ಬಗ್ಗೆ ತಿಳಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅವರಿಗೂ ಮತದಾನ ಮಾಡಲೇಬೇಕೆಂಬ ಮನೋಭಾವ ಉಂಟಾಗುತ್ತದೆ. ಇದರಿಂದ ಮತದಾನ ಹೆಚ್ಚಳದ ಉದ್ದೇಶ ಸಫಲವಾಗುತ್ತದೆ ಎಂದರು.
ಕನ್ನಡ ಚಲನಚಿತ್ರ ನಟ ಜಿಮ್ ರವಿ ಮಾತನಾಡಿ, ಮತದಾನ ಎಂಬುದು ಒಂದು ಹಬ್ಬದ ಹಾಗೆ. ಇದರಲ್ಲಿ ಎಲ್ಲರೂ ನೈತಿಕವಾಗಿ ಭಾಗವಹಿಸಬೇಕು. ಸದೃಢ ದೇಹಬೇಕೆಂದರೆ ನಿತ್ಯವು ವ್ಯಾಯಾಮ ಮಾಡಬೇಕು. ಅದೇ ರೀತಿಯಾಗಿ ದೇಶವನ್ನು ಅಭಿವೃದ್ಧಿಗೊಳಿಸಲು ಉತ್ತಮ ನಾಯಕನ ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಚುನಾವಣೆಯ ದಿನದಂದು ರಜಾ ದಿನ ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪು. ಮತದಾನ ನಮ್ಮೆಲ್ಲರ ಹಕ್ಕು. ಆ ದಿನದಂದು ಪ್ರತಿಯೊಬ್ಬರು ತಮ್ಮ ಮತ ಚಲಾಯಿಸಬೇಕು ಎಂದರು.
ಮತದಾರರು ಯಾವುದೇ ಆಸೆ ಅಮಿಷಗಳಿಗೆ ಒಳಗಾಗದೆ ನೈತಿಕವಾಗಿ ತಮ್ಮ ಮತವನ್ನು ಚಲಾಯಿಸಬೇಕು. ಇದರೊಂದಿಗೆ ಈ ಸಲ ಮೈಸೂರಿನಲ್ಲಿ ಶೇಕಡ ನೂರಕ್ಕೆ ನೂರರಷ್ಟು ಮತದಾನ ಮಾಡುವುದಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ಆಯುಕ್ತ ಬಿ.ರಮೇಶ್, ಪಾಲಿಕೆಯ ಆಯುಕ್ತೆ ಎನ್.ಎನ್.ಮಧು ಸೇರಿದಂತೆ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.