ಮುನಿವೆಂಕಟಪ್ಪ 7ನೇ ಪುಣ್ಯಸ್ಮರಣೆ ಅಂಗವಾಗಿ ಪೌರಕಾರ್ಮಿಕರಿಗೆ ವಿವಿಧ ಸವಲತ್ತುಗಳ ವಿತರಣೆ

muni
Published on

ಬೆಂಗಳೂರು: ರಾಜರಾಜೇಶ್ವರಿನಗರದ ನಗರಸಭೆ ಮಾಜಿ ಉಪಾಧ್ಯಕ್ಷರಾಗಿದ್ದ ದಿವಂಗತ ಮುನಿವೆಂಕಟಪ್ಪ ಅವರ 7ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಸ್ಥಳೀಯ ಪೌರಕಾರ್ಮಿಕರಿಗೆ ಉಚಿತ ಸೀರೆ ಮತ್ತು ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಜ್ಞಾನಭಾರತಿ ವಾರ್ಡ್ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಜಯರಾಮಯ್ಯ, ಮುನಿವೆಂಕಟಪ್ಪನವರು ಶ್ರಮಿಕರು ,ಬಡವರು,ನೊಂದವರ ಸೇವೆ ಮಾಡುವ ಮೂಲಕ ಒಬ್ಬ ಜನಪ್ರತಿನಿಧಿ ಯಾವ ರೀತಿ ಸಮಾಜ ಸೇವೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದರು. ಎರಡು ಬಾರಿ ನಗರಸಭೆ ಸದಸ್ಯ, ಒಮ್ಮೆ ನಗರಸಭೆ ಉಪಾಧ್ಯಕ್ಷರಾಗಿ ಸೇವೆಮಾಡುವ ಮೂಲಕ ಅಧಿಕಾರದ ದರ್ಪವಿಲ್ಲದೆ ಎಲ್ಲರೊಂದಿಗೆ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದರು ಎಂದು ಸ್ಮರಿಸಿದರು.

ಸ್ಥಳೀಯ ಬಿಜೆಪಿ ಮುಖಂಡ ಶಿವಶಂಕರ್ ಮಾತನಾಡಿ, ನಾಗರೀಕರಿಗೆ ಕುಡಿಯಲು ಕಾವೇರಿ ನೀರು, ಹಲವು ದಶಕಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಮುನಿವೆಂಕಟಪ್ಪನವರ ಶ್ರಮ ಇತ್ತು ಎಂದರು.

ಕೇಂದ್ರ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಮಲ್ಲತ್ತಹಳ್ಳಿ ಎಂ.ಮಂಜುನಾಥ್ ಮಾತನಾಡಿ, ಯಾರೊಂದಿಗೂ ದ್ವೇಷ, ಅಸೂಯೆ ಇಲ್ಲದೆ ಸೇವೆ ಮಾಡುವುದೇ ನೀಜವಾದ ನಾಯಕತ್ವ ಎಂಬುದನ್ನು ಕಿರಿಯರಿಗೆ ತಿಳಿಹೇಳುತ್ತಿದ್ದ ಮುನಿವೆಂಕಟಪ್ಪನವರು ಹಾಕಿಕೊಟ್ಟ ಹಾದಿಯಲ್ಲಿ ಯುವ ರಾಜಕಾರಣಿ ಮುನ್ನಡೆಯಬೇಕು ಎಂದರು. ಕಾಯಕ್ರಮದಲ್ಲಿ ಮುಖಂಡರಾದ ಹನುಮಯ್ಯ, ಲಕ್ಷ್ಮಣ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net