

ಪಾಂಡವಪುರ: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಹೇಳಿದರು.
ತಾಲೂಕಿನ ನ್ಯಾಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ರೋಟರಿ ಬೆಂಗಳೂರು ಉತ್ತರ, ಅನನ್ಯ ಹಾರ್ಟ್ ಸಂಸ್ಥೆ ಹಾಗೂ ರೋಟರಿ ಮಂಡ್ಯ, ಬೆಂಗಳೂರು ರೋಟರಿ ಉದ್ಯೋಗ ಸಂಸ್ಥೆ, ಬೆಂಗಳೂರು ರೋಟರಿ ನಂದಿನಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು. ಇಂದು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಪಾಲಕರು ತಮ್ಮ ಮಕ್ಕಳು ಕಾನ್ವೆಂಟ್‌ನಲ್ಲಿ ಓದಬೇಕೆಂಬ ವ್ಯಾಮೋಹವಾಗಿದೆ. ಆದರೆ ಸರ್ಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯ ನೀಡಲಾಗುತ್ತಿದೆ. ಶಿಕ್ಷಕರು ದಾನಿಗಳ ಸಹಾಯ ಪಡೆದು ಮಕ್ಕಳಿಗೆ ಸೌಕರ್ಯ ಒದಗಿಸಿಕೊಡುತ್ತಿದ್ದಾರೆ. ಅದರಂತೆ ರೋಟರಿ ಸಂಸ್ಥೆ ನ್ಯಾಮನಹಳ್ಳಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಿರುವುದು ಅಭಿನಂದನೀಯ ಎಂದರು.
ಮಂಡ್ಯ ರೋಟರಿ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಬೆಂಗಳೂರು ಉತ್ತರ ರೋಟರಿ ಅಧ್ಯಕ್ಷ ಜಾನಕಿರಾಂ, ಬೆಂಗಳೂರು ರೋಟರಿ ಉದ್ಯೋಗ ಸಂಸ್ಥೆ ಅಧ್ಯಕ್ಷ ಪಂಚನಾಥನ್, ಬೆಂಗಳೂರು ರೋಟರಿ ನಂದಿನಿ ಸಂಸ್ಥೆ ಅಧ್ಯಕ್ಷ ಕುಮಾರಸ್ವಾಮಿ, ಬೆಂಗಳೂರು ಕೌಶಲಾಧಿಕಾರಿ ವೇಣುಗೋಪಾಲ್, ಲಕ್ಷ್ಮೀನಾರಾಯಣ್, ರಾಜೇಶ್, ಸೋಮೇಗೌಡ, ರಾಮಚಂದ್ರ, ಬರ್ನಾಡಪ್ಪ, ರಮೇಶ್, ಪೂರ್ಣಿಮಾ, ಮಮತಾ, ಅನಿಲ ಇತರರಿದ್ದರು.