ಅಂಕ ಗಳಿಕೆ ಜತೆಗೆ ಕ್ರೀಡಾ ಸಾಧನೆ ಮುಖ್ಯ

mkg1
Published on

ಜಗಳೂರು: ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತರಾಗದೆ ಕ್ರೀಡಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.

ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಭಾನುವಾರ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ತಾಲೂಕು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ 4ನೇ ಬಾರಿ ಪ್ರಥಮ ಸ್ಥಾನ ಪಡೆದಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರ ಹೊಮ್ಮುತ್ತಿದ್ದು, ಇದಕ್ಕೆ ಶಿಕ್ಷಕರ ಪರಿಶ್ರಮವೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಿಂದ ಸುಮಾರು 423 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ಈ ಬಾರಿ ರಾಜ್ಯಮಟ್ಟದಲ್ಲೂ ಸ್ಪರ್ಧಿಸಿ ಬಹುಮಾನ ಪಡೆಯಬೇಕು. ಇದಕ್ಕೆ ಎಲ್ಲ ಸಹಕಾರ ನೀಡಲಾಗುವುದು ಎಂದರು.

ಇದೇ ವೇಳೆ ಪಟ್ಟಣದ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕರಾದ ರಾಜಣ್ಣ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ದೈಹಿಕ ಶಿಕ್ಷಕರಾಗಿದ್ದರೂ ಮಕ್ಕಳ ಜತೆ ಇದ್ದು ಕ್ರೀಡಾಕೂಟಕ್ಕೆ ಬರದೇ ಬೇರೊಬ್ಬರನ್ನು ಕಳಿಸಿದ್ದು, ಅವರಿಗೆ ಹಾಜರಾತಿ ಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ರೆಡ್ಡಿ ಮಾತನಾಡಿ, ದೈಹಿಕ ಶಿಕ್ಷಕರ ಕೊರತೆಯ ನಡುವೆಯೂ ತಾಲೂಕಿನ ಕ್ರೀಡಾಪಟುಗಳು ಉತ್ತಮ ಪ್ರತಿಭೆ ಮೆರೆದು ಕೀರ್ತಿ ತಂದಿದ್ದಾರೆ ಎಂದರು.

ಪಪಂ ಸದಸ್ಯರಾದ ಮಂಜುನಾಥ್, ಶಕೀಲ್, ಬಿ.ಪಿ. ಸುಭಾನ್, ಸಣ್ಣ ತಾನಾಜಿ ಗೋಸಾಯಿ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಹಮದ್ ಅಲಿ, ಮುಖಂಡರಾದ ಅನುಪ್ ರೆಡ್ಡಿ, ಬರ್ಕತ್ ಅಲಿ, ಗುರುಮೂರ್ತಿ, ರಂಗನಾಥ್ ರೆಡ್ಡಿ, ಉಪನ್ಯಾಸಕ ತಿಪ್ಪೇಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net