ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಕಿವಿಮಾತು

1 (1)
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಬದುಕು ರೂಪಿಸುವ ಹಾಗೂ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ವಿದ್ಯಾವಂತರಿಂದಲೇ ದುಷ್ಕೃತ್ಯಗಳು ಹೆಚ್ಚಾಗಿ ನಡೆಯುತ್ತಿರುವುದು ಆತಂಕದ ವಿಷಯ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಬಾಲ್ಯದಿಂದಲೇ ಮಾನವೀಯ ಮೌಲ್ಯ ಬೆಳಸಬೇಕಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಕಿವಿಮಾತು ಹೇಳಿದರು.

ನಗರದ ಮರೀಗೌಡ ಬಡಾವಣೆಯ ಕಾಳೇಗೌಡ ಪ್ರೌಢಶಾಲೆಯಲ್ಲಿ ಕೃಷಿಕ ಲಯನ್ಸ್ ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಹಾಗೂ ನಗರ ನೀರು ಸರಬರಾಜು ಇಲಾಖೆಯ ನಿವೃತ್ತ ನೌಕರ ಎಂ.ಕೆ. ಜವರೇಗೌಡ ಅವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು, ಸಾಮಾನ್ಯ ವ್ಯಕ್ತಿಯು ಕೂಡ ಕ್ರೀಡೆ ಕಲೆ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡುವ ಮೂಲಕ ಉನ್ನತ ಸ್ಥಾನಮಾನವನ್ನು ಗಳಿಸಿಕೊಳ್ಳಬಹುದು. ಅದಕ್ಕೆ ತಕ್ಕಂತೆ ಕೌಶಲ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು

ಇಂದಿನ ವಿದ್ಯಾರ್ಥಿಗಳು ಬರೀ ಟಿವಿ ಮೊಬೈಲ್ ದಾಸರಾಗಿದ್ದಾರೆ. ಆದ್ದರಿಂದ ಪಾಲಕರು ಮಕ್ಕಳತ್ತ ಗಮನ ಹರಿಸಬೇಕು. ಸಾಮಾನ್ಯ ಜ್ಞಾನ, ಓದುವ ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೂರಕ ವಾತವರಣ ಸೃಷಿಕೊಡಬೇಕಿದೆ. ವಿದ್ಯಾರ್ಥಿಗಳು 100ಕ್ಕೆ ನೂರಷ್ಟು ಅಂಕ ಪಡೆದರೂ ಉದ್ಯೋಗ ಲಭ್ಯವಾಗುತ್ತಿಲ್ಲ. ಆದ್ದರಿಂದ ಕಡಿಮೆ ಅಂಕ ಬಂದಿದೆ ಎಂದು ದುಡುವುದು ಬೇಡ. ಓದಿನಲ್ಲಿ ಆಸಕ್ತಿ ಕಡಿಮೆ ಇದ್ದವರು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಲಯನ್ಸ್ ಸಂಸ್ಥೆಯ ಮಾಜಿ ಗರ್ವನರ್ ಡಾ.ನಾಗರಾಜು ವಿ.ಭೈರಿ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಇದು ಉತ್ತಮ ಬೆಳೆವಣಿಗೆ. ಲಯನ್ಸ್ ಸಂಸ್ಥೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರು. ಎಲ್ಲರೂ 90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದರು. ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಹುದ್ದೆಗಳಲ್ಲಿ ಇರುವವರನ್ನು ನೋಡಬಹುದು. ಆದ್ದರಿಂದ ಯಾವುದಕ್ಕೂ ಹಿಂಜರಿಕೆ ಬೇಡ, ಸಾಧನೆ ಮಾಡುವ ಹಂಬಲ ನಿಮ್ಮಲ್ಲಿರಲಿ ಎಂದು ನುಡಿದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಎಂ.ಎಸ್.ರಾಜೇಂದ್ರ ಪ್ರಸಾದ್ ವಿದ್ಯಾಸಂಸ್ಥೆ ಕಾರ್ಯದರ್ಶಿ ನಾಗರತ್ನ, ನಗರ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎನ್.ಮೇಘ, ಸಹಾಯಕ ಇಂಜಿನಿಯರ್ ಆದರ್ಶ, ಕೃಷಿಕ ಲಯನ್ಸ್ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಮೋಹನ್‌ಕುಮಾರ್, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಚಂದ್ರಪ್ರಭ, ಮುಖ್ಯಶಿಕ್ಷಕ ಜಿ.ಸಿ.ಗೋವಿಂದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net