ಮನೆ ಸಕ್ರಮಕ್ಕೆ ಹಂತ ಹಂತವಾಗಿ ಹಕ್ಕು ಪತ್ರ ವಿತರಣೆ

2 vikram 11
Published on

ಮನೆ ಸಕ್ರಮಕ್ಕೆ ಹಂತ ಹಂತವಾಗಿ ಹಕ್ಕು ಪತ್ರ ವಿತರಣೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಬಡತನದ ಕಾರಣದಿಂದ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಜಾಗೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸಲು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಹಂತ ಹಂತವಾಗಿ 1588 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದು ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು.

ಕಿತ್ತೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ಹೆಬ್ಬಳ್ಳಿ, ಕಲ್ಲೂರು, ಮರೇವಾಡ ಹಾಗೂ ವೆಂಕಟಾಪುರ ಗ್ರಾಮಗಳ 300 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.

ಅಕ್ರಮ ಮನೆಗೆ ಅಧಿಕೃತ ದಾಖಲೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶೇಷ ಆಸಕ್ತಿಯಿಂದ ಕಾನೂನಿಗೆ ತಿದ್ದುಪಡಿ ತಂದು ರಾಜ್ಯಾದ್ಯಂತ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲಾಗುತ್ತಿದೆ. ರಾಜ್ಯದಲ್ಲಿ 1.11 ಲಕ್ಷ ಕುಟುಂಬಗಳಿಗೆ ಮನೆಯ ಇ-ಸ್ವತ್ತು ಸೇರಿ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದರು.

ಬೆಳಗಾವಿ ಜಿಲ್ಲೆ ಜನರು ಅಭಿವೃದ್ಧಿ ವಿಷಯದಲ್ಲಿ ವಿರೋಧಿಸುವುದು ಬೇಡ. ಕೈಗಾರಿಕೆಗಳ ಬೆಳವಣಿಗೆ ಅಭಿವೃದ್ಧಿಯಾದರೆ ಬೆಳಗಾವಿ ಪದವೀಧರರಿಗೂ ಉದ್ಯೋಗಾವಕಾಶ ಸಿಗಲಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗವಕಾಶ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಹಿಡಕಲ್ ಆಣೆಕಟ್ಟು ನೀರು ನೀಡಲು ವಿರೋಧ ಬೇಡ ಎಂದು ಬೆಳಗಾವಿ ಜನರಿಗೆ ಮನವಿ ಮಾಡಿದರು.

ಅಕ್ರಮ ಸಕ್ರಮ ಯೋಜನೆ ಅಡಿ 300 ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಮಹಾನಗರ ಪಾಲಿಕೆ ಹಾಗೂ ದೇವರಾಜ ಅರಸು ನಿಗಮದಿಂದ ಧಾರವಾಡ 2 ಮತ್ತು 4ನೇ ವಾರ್ಡ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪಟಾಪ್ ವಿತರಿಸಲಾಯಿತು.

ತಹಸೀಲ್ದಾರ ಡಿ.ಎಚ್. ಹೂಗಾರ, ಧಾರವಾಡ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ, ಪಾಲಿಕೆ ವಿಪಕ್ಷ ನಾಯಕ ರಾಜಶೇಖರ ಕಮತಿ, ಪ್ರಕಾಶ ಘಾಟಗೆ, ಚನ್ನಬಸಪ್ಪ ಮಟ್ಟಿ, ವಿಠ್ಠಲ ಭೋವಿ, ಸಿದ್ಧರಾಮ ದಂಡಿನ, ಇಸ್ಮಾಯಿಲ್ ಸಾಯದನವರ, ಶಂಕುಂತಲಾ ಬಂಗಿ, ತಾಲೂಕು ಅಧಿಕಾರಿ ಗಂಗಾಧರ ಕಂದಕೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net