ಮರ ಕಡಿದರೆ ಉಸಿರು ನಿಂತೀತು...

Plant 1
Published on

ಅರಣ್ಯ ಪಾಲಕ ಕೇಶವ ಪೂಜಾರಿ ಎಚ್ಚರಿಕೆ

ವಿದ್ಯಾರ್ಥಿಗಳಿಗೆ ಸಾಗವಾನಿ ಗಿಡ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಒಂದು ಗಿಡ ನೆಟ್ಟು ಮೂರು ವರ್ಷ ಜಾಗ್ರತೆಯಿಂದ ಬೆಳೆಸಿದರೆ ಆ ಗಿಡ ಮರವಾಗಿ ಬೆಳೆದು ನೂರು ವರ್ಷಗಳ ಕಾಲ ನಮ್ಮನ್ನು ಬೆಳೆಸುತ್ತದೆ. ಹೀಗಾಗಿ ಪರಿಸರವನ್ನು ನಾವು ರಕ್ಷಿಸುತ್ತೇವೆ ಎನ್ನುವದಕ್ಕಿಂತ ನಾನು ರಕ್ಷಿಸುತ್ತೇನೆ ಎನ್ನುವುದು ಮುಖ್ಯ. ನಮ್ಮ ಉಸಿರಾಟಕ್ಕೆ ಮರಗಳು ನೀಡುವ ಆಮ್ಲಜನಕ ಬೇಕು. ಅದನ್ನರಿಯದೆ ಅಬಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುತ್ತಿದ್ದರೆ ಎಲ್ಲರ ಉಸಿರು ನಿಂತೀತು ಎಂದು ಉಡುಪಿ ಗಸ್ತು ಅರಣ್ಯ ಪಾಲಕ ಕೇಶವ ಪೂಜಾರಿ ಎಚ್ಚರಿಕೆ ನೀಡಿದರು.

ಉಡುಪಿ ಉದ್ಯಾವರದ ಸ್ಮಾರ್ಟ್​ ಇಂಡಿಯನ್​ ಇಂಗ್ಲಿಷ್​ ಮೀಡಿಯಂ ಸ್ಕೂಲ್​ ಪಿತ್ರೋಡಿಯಲ್ಲಿ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್​ ಸರ್ಕಲ್​ ವತಿಯಿಂದ ಜುಲೈ 12ರಂದು ಆಯೋಜಿಸಿದ್ದ ಸಾಗವಾನಿ ಗಿಡ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಿಡ ಬೆಳೆಸಿದ  ಮಕ್ಕಳಿಗೆ ಬಹುಮಾನ

Plant 2
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್​ ಮಾತನಾಡಿ, ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುವ ಮೂಲಕ ಮನುಷ್ಯನೇ ತನ್ನ ಬದುಕನ್ನು ಆತಂಕಕ್ಕೆ ತಳ್ಳಿಕೊಳ್ಳುತ್ತಿದ್ದಾನೆ. ಅರಣ್ಯ ನಾಶವಾದರೆ ಮನುಕುಲವೂ ನಾಶವಾದಂತೆ. ಹೀಗಾಗಿ ಗಿಡ ಬೆಳೆಸಿ, ಮರಗಳನ್ನ ರಕ್ಷಿಸಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಮಕ್ಕಳಿಗೆ ಹಲವಾರು ವರ್ಷದಿಂದ ಗಿಡ ನೀಡುತ್ತಿದೆ. ವರ್ಷದ ಬಳಿಕ ಅವರ ಮನೆಗೆ ಭೇಟಿ ಕೊಟ್ಟು ಗಿಡ ಬೆಳೆಸಿದ ರೀತಿ ಪರಿಶೀಲಿಸಿ ಬಹುಮಾನವನ್ನೂ ನೀಡುತ್ತಿದ್ದೇವೆ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಅರ್ಚನಾ ಎ. ಬಂಗೇರ ಕಾರ್ಯಕ್ರಮದ ಔಚಿತ್ಯ ವಿವರಿಸಿದರು. ನಿರ್ದೇಶಕ ಯು.ಪದ್ಮನಾಭ ಕಾಮತ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಹೇಲ್​ ರಹಮತುಲ್ಲ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಗಿರೀಶ ಗುಡ್ಡೆಯಂಗಡಿ ಸ್ವಾಗತಿಸಿದರು. ಶಿಕ್ಷಕಿ ಉಷಾ ಆಚಾರ್ಯ ವಂದಿಸಿದರು. ಮಾಜಿ ಅಧ್ಯಕ್ಷ ತಿಲಕರಾಜ್​ ಸಾಲ್ಯಾನ್​ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಗವಾನಿ ಸೇರಿದಂತೆ ವಿವಿಧ ಗಿಡ ವಿತರಿಸಲಾಯಿತು.

ಸ್ವಾತಂತ್ರ್ಯದ ಮೊದಲು ದೇಶದಲ್ಲಿ ಶೇ.44 ಕಾಡು ಪ್ರದೇಶವಿತ್ತು. ಅದೀಗ ಶೇ.24ಕ್ಕೆ ಇಳಿದಿದೆ. ಕರ್ನಾಟಕದಲ್ಲಿ ಶೇ.20 ಇದೆ. ಉಸಿರಾಟಕ್ಕಾಗಿ ಒಬ್ಬರಿಗೆ ಸರಾಸರಿ 6ರಿಂದ 7 ಮರಗಳಿಂದ ಹೊರ ಸೂಸುವ ಆಮ್ಲಜನಕದ ಅವಶ್ಯಕತೆ ಇದೆ. ಹಾಗಾಗಿ ಮಕ್ಕಳೇ, ಬದುಕು ಸುಗಮವಾಗಲು ನೀವು ಎಲ್ಲಿ ಸ್ಥಳ ಇದೆಯೋ ಅಲ್ಲಿ ಒಂದು ಗಿಡ ನೆಟ್ಟು ಮರವನ್ನಾಗಿ ಬೆಳೆಸಿ. | ಕೇಶವ ಪೂಜಾರಿ. ಉಡುಪಿ ಗಸ್ತು ಅರಣ್ಯ ಪಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net