

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಪೂರ್ವವಾಹಿನಿಯ ಚಂದ್ರವನ ಆಶ್ರಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿಯ ಪ್ರಯುಕ್ತ ತಂಬಿಟ್ಟು ಉಂಡೆಗಳನ್ನು ಸಿದ್ಧತೆ ಮಾಡಿ, ಭಕ್ತರಿಗೆ ವಿತರಿಸಲಾಯಿತು.
ಮಹಾಶಿವರಾತ್ರಿಯ ದಿನದಂದು ಆಶ್ರಮದ ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರು ಶ್ರೀ ಕಾಶಿಚಂದ್ರಮೌಳೇಶ್ವರ ಸ್ವಾಮಿಗೆ ಪ್ರಥಮವಾಗಿ ರುದ್ರಾಭಿಷೇಕ ಮಾಡಿದರು. ಬಳಿಕ ಸಾರ್ವಜನಿಕರಿಗೆ ಗರ್ಭಗುಡಿಗೆ ಮುಕ್ತ ಪ್ರವೇಶ ಹಾಗೂ ಸ್ವಯಂ ಭಕ್ತರೇ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆಶ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಫಲಾಹಾರ, ಕೋಸಂಬರಿ, ಪಾನಕ ಹಾಗೂ ತಂಬಿಟ್ಟನ್ನು ವಿತರಿಸಲಾಗುತ್ತಿದ್ದು, ಇದಕ್ಕಾಗಿ ಸುಮಾರು 4 ಸಾವಿರ ತಂಬಿಟ್ಟನ್ನು ಸಿದ್ಧಪಡಿಸಲಾಗಿದೆ.
ಶುಕ್ರವಾರ ರಾತ್ರಿ 9 ಗಂಟೆಯಿಂದ ಬೆಳಗ್ಗಿನ ಜಾವದವರೆಗೂ ಶ್ರೀಗಳಿಂದ ಶಿವಪೂಜೆ ಹಾಗೂ ಪೂಜೆಗಳು ಜರುಗಿದವು. ದೇವರ ಪೂಜೆಗೆ ಗರ್ಭಗುಡಿಗೆ ಪ್ರವೇಶಿಸುವ ಪುರುಷರು ಪಂಚೆ, ಶಲ್ಯ ಹಾಗೂ ಮಹಿಳೆಯರು ಭಾರತೀಯ ಸಂಸ್ಕೃತಿಯ ಉಡುಗೆಯನ್ನು ಕಡ್ಡಾಯವಾಗಿ ಧರಿಸಿ ಆಗಮಿಸಲು ಹಾಗೂ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಆಡಳಿತ ಮಂಡಳಿ ಕೋರಿದೆ.