

ವಿಜಯವಾಣಿ ಸುದ್ದಿಜಾಲ ಉಡುಪಿ
ಪುರಾಣ ಕಥೆಗಳು ಮನರಂಜನೆಗಾಗಿ ಇರುವುದಲ್ಲ. ಅವು ಮನಸ್ಸಿನ ಪರಿವರ್ತನೆ ಹಾಗೂ ನೆಮ್ಮದಿ ಕೊಡಲೆಂದೇ ರಚಿತವಾಗಿವೆ. ಅಂತಹ ಪುರಾಣ ಕಥಾನಕಗಳನ್ನು ಜನಮಾನಸಕ್ಕೆ ತಲುಪಿಸಿ, ಜನರ ಹಾಗೂ ದೇಶದ ಭವಿಷ್ಯ ನಿರ್ಮಿಸುವ ಮಹತ್ತರ ಕಲೆ ತಾಳಮದ್ದಲೆ ಹಾಗೂ ಯಕ್ಷಗಾನವಾಗಿದೆ ಎಂದು ಮೂಡಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಹೇಳಿದರು.
ಉಡುಪಿಯ ಕಲಾರಂಗ ಐವೈಸಿ ಸಭಾಭವನದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಜಬ್ಬಾರ್ ಸಮೋ ಅವರಿಗೆ ಮಟ್ಟಿ ಮುರಲೀಧರ್ ರಾವ್ ತಾಳಮದ್ದಲೆ ಪ್ರಶಸ್ತಿ ಹಾಗೂ ಸೇರಾಜೆ ಸೀತಾರಮ್ ಭಟ್ ಅವರಿಗೆ ಪೆರ್ಲ ಕೃಷ್ಣ ಭಟ್ ತಾಳಮದ್ದಲೆ ಪ್ರಶಸ್ತಿ ವಿತರಿಸಿ ಆಶೀರ್ವಚನ ನೀಡಿದರು.
ಈ ಇಬ್ಬರೂ ಕಲಾವಿದರು ನುಡಿ ತೋರಣ ಕಟ್ಟಿ, ಭಾರತೀಯ ಸಂಸ್ಕೃತಿ, ಸಂಸ್ಕಾರ, ಸಿದ್ಧಾಂತ ಹಾಗೂ ಭಾರತದ ವಿರಾಟ್ ಸ್ವರೂಪವನ್ನು ಕಣ್ಣೆದುರಿಗೆ ನಿಲ್ಲಿಸುತ್ತಾರೆ. ಮಾತಿನ ಮೂಲಕವೇ ದೇವರ ಪಾತ್ರ ಸೃಷ್ಟಿಸಿ, ತಾವೇ ಆ ಪಾತ್ರದೊಳಗೆ ಹೊಕ್ಕಿ, ದೇವರನ್ನು ಭೂಮಿಗೆ ಕರೆತರುವ ಶ್ರೇಷ್ಠ ಕಲಾವಿದರು ಇವರು. ಯಕ್ಷಗಾನ, ತಾಳಮದ್ದಲೆಯಂತಹ ಕಲೆಯಿಂದ ಜೀವನದ ನಿತ್ಯ ಸಂಘರ್ಷ ನಿವಾರಣೆ ಆಗಲು ಸಾಧ್ಯವಿದೆ ಎಂದರು.
ಮಂಗಳೂರಿನ ಶಾರದಾ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಡಾ. ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಪಂಜ ಭಾಸ್ಕರ ಭಟ್ ಸುರತ್ಕಲ್ ಅಭಿನಂದನೆ ಸಲ್ಲಿಸಿದರು. ಕುಂದಾಪುರದ ಆದರ್ಶ ಆಸ್ಪತ್ರೆಯ ಸಂಸ್ಥಾಪಕ ಡಾ. ಆದರ್ಶ ಹೆಬ್ಬಾರ್, ಉಡುಪಿ ನಗರಸಭಾ ಸದಸ್ಯೆ ರಜನಿ ಹೆಬ್ಬಾರ್, ಕಲಾರಂಗದ ಉಪಾಧ್ಯಕ್ಷರಾದ ಕಿಶನ್ ಹೆಗ್ಡೆ ಪಳ್ಳಿ, ಎಸ್.ವಿ. ಭಟ್, ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗ್ಡೆ ಪ್ರಶಸ್ತಿ ಪುರಸ್ಕೃತರ ಸಾಧನೆ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೇಕಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ನಡೆದ ಪಾರ್ತಿ ಸುಬ್ಬ ವಿರಚಿತ ಸೀತಾಪಹಾರ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಪ್ರಶಸ್ತಿ ಅತ್ಯಂತ ಘನವಾದದ್ದು. ಕೊಡಗಿನಿಂದ ಕಾಸರಗೋಡುವರೆಗಿನ ವಿಸ್ತಾರವಾದ ಪಯಣದ ಏಳು- ಬೀಳುಗಳಲ್ಲಿ ನನ್ನ ಎತ್ತಿ ಹಿಡಿದ ಎಲ್ಲರನ್ನೂ ಸ್ಮರಿಸುತ್ತೇನೆ. ಪ್ರಕೃತಿಗೆ ಹಸಿರು ಹೇಗೆ ಬಂತು? ಸೂರ್ಯನೋ, ಚಂದ್ರನೋ, ಕೃಷಿಕನೋ, ಭೂತಾಯಿಯ ಕೃಪೆಯೋ ತಿಳಿದಿಲ್ಲ. ಅದರಂತೆ ನನ್ನ ಸಾಧನೆಗೆ ನಾನೊಬ್ಬನೇ ಕಾರಣನಲ್ಲ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಎಲ್ಲರಿಗೆ ಆಭಾರಿಯಾಗಿದ್ದೇನೆ. ಜಬ್ಬಾರ್ ಸಮೊ. ಪ್ರಶಸ್ತಿ ಪುರಸ್ಕೃತ ಕಲಾವಿದ
ಉಡುಪಿ ನನ್ನ ಹೋಮ್ ಪಿಚ್. ಆರಂಭದ ವಿದ್ಯಾರ್ಜನೆಯಿಂದ ಎಲ್ಎಲ್ಬಿ ವರೆಗೆ ಇಲ್ಲಿಯೇ ಕಲಿತಿದ್ದೇನೆ. ತಾಳಮದ್ದಲೆಯ ಸಾಧನೆಗೆ ನನ್ನ ಗುರು ವಿಠ್ಠಲ ಶಾಸ್ತ್ರಿ ಅವರ ಆಶೀರ್ವಾದವೇ ಕಾರಣ. ದಕ, ಉಕ ಹಾಗೂ ಕಾಸರಗೋಡಿನ ಜನ ನನ್ನ ತಾಳಮದ್ದಲೆಗೆ ಪ್ರೋತ್ಸಾಹಿಸಿದ್ದಾರೆ. ನಾನು ಬೇರೇನೂ ಗಳಿಸದಿದ್ದರೂ ತಾಳಮದ್ದಲೆ ಮೂಲಕ ಅಸಂಖ್ಯಾತ ಸ್ನೇಹಿತರ ಬಳಗ ಗಳಿಸಿರುವ ತೃಪ್ತಿಯಿದೆ. ಸೇರಾಜೆ ಸೀತಾರಾಮ್ ಭಟ್. ಪ್ರಶಸ್ತಿ ಪುರಸ್ಕೃತ ಕಲಾವಿದ