

ಚಿಕ್ಕಮಗಳೂರು: ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಿತದೃಷ್ಟಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಾಂತ್ರಿಕವಾಗಿ ಪಠ್ಯದ ಪರಿಕರಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವ ಯೋಜನೆ ಸರ್ಕಾರದ ಕಾಯರ್ಯಕ್ರಮಕ್ಕಿಂತಲೂ ಯಶಸ್ವಿ ಯೋಜನೆ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಕಡೂರು ಪಟ್ಟಣದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಯ ಕಚೇರಿಯಲ್ಲಿ ಸೋಮವಾರ ಯೋಜನೆಯ ಮೂಲಕ ಸಂಘದ ಸದಸ್ಯರ ಮಕ್ಕಳಿಗೆ ಸಾಂಕೇತಿಕವಾಗಿ ಜ್ಞಾನತಾಣ ಯೋಜನೆಯಡಿ ಟ್ಯಾಬ್ ಮತ್ತು ಲ್ಯಾಪ್ ಟ್ಯಾಪ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇದೇ ವೇಳೆ ಸಂಸ್ಥೆಯ ಮಾಹಿತಿ ಪ್ರತಿಗಳನ್ನು ಬಿಡುಗಡೆ ಮಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ರೂಪಿಸಿರುವ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅತ್ಯಂತ ಪೂರಕ. ಸಂಘದ ಸದಸ್ಯರ ಮಕ್ಕಳಿಗೆ ಅದರಲ್ಲೂ ಕನ್ನಡ ಮಾಧ್ಯಮದ ಆನ್ಲೈನ್ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಟ್ಯಾಬ್ ವಿತರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ
ಜಿಪಂ ಸದಸ್ಯ ಕೆ.ಆರ್.ಮಹೇಶ್ಒಡೆಯರ್ ಮಾತನಾಡಿ, ಆನ್ಲೈನ್ ಶಿಕ್ಷಣದ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲೇ ರಾಜ್ಯಾದ್ಯಂತ ಮಕ್ಕಳಿಗೆ ಜ್ಞಾನತಾಣ ಹೆಸರಿನಲ್ಲಿ ಟ್ಯಾಬ್ ವಿತರಣೆ ಮಾಡುತ್ತಿರುವುದು ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯನ್ನು ಬಿಂಬಿಸುತ್ತದೆ ಎಂದರು.
ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕರೊನಾ ಹಾವಳಿಯಿಂದ ಯಾವ ಶಾಲಾ ಕಾಲೇಜುಗಳು ಆರಂಭಿಸದೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿಯಲ್ಲಿ ಮಕ್ಕಳ ವ್ಯಾಸಂಗಕ್ಕೆ ಅಡ್ಡಿಯಾಗದಂತೆ ಸಂಸ್ಥೆಯಿಂದ ರಿಯಾಯಿತಿ ದರದಲ್ಲಿ ಟ್ಯಾಬ್ ಳನ್ನು ವಿತರಿಸುತ್ತಿರುವುದು ಹೆಮ್ಮೆಯ ಸಂಗತಿ. ಸಂಘದ ಸದಸ್ಯರ ಮಕ್ಕಳು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಕರುಣಾಕರ ಆಚಾರ್ಯ ಮಾತನಾಡಿ, 5ರಿಂದ 10ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಸಂಘದ ಸದಸ್ಯರ ಮಕ್ಕಳಿಗೆ ಯೋಜನೆಯ ಮೂಲಕ ರಿಯಾಯಿತಿ ದರದಲ್ಲಿ ರಾಜ್ಯದಾದ್ಯಂತ 20 ಸಾವಿರ ಟ್ಯಾಬ್ ವಿತರಿಸಲು ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗುತ್ತದೆ. ಕಡೂರು ತಾಲೂಕಿನಲ್ಲಿ ಮೊದಲ ಹಂತದಲ್ಲಿ 120 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗುತ್ತದೆ. ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ಪಠ್ಯಕ್ರಮವನ್ನು ಇದರಲ್ಲಿ ಮೊದಲೇ ಅಳವಡಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಯೋಜನೆಯ ಮೇಲ್ವಿಚಾರಕರಾದ ನಾಗರಾಜ್ ಮತ್ತು ಅನ್ನಪೂರ್ಣ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.