

ನಗರದ ಬಿಜೆಪಿ ಕಚೇರಿಯಲ್ಲೂ ಸಂಭ್ರಮಾಚರಣೆ ನಡೆಯಿತು. ಬಿಜೆಪಿ ನಾಯಕರು, ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಇಸ್ರೋ ವಿಜ್ಞಾನಿಗಳ ಪರ ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.
ಮೇಯರ್ ಶಿವಕುಮಾರ್ ಮಾತನಾಡಿ, ಚಂದ್ರಯಾನ-3ರ ನೌಕೆ ಯಶಸ್ವಿಯಾಗಿ ಉಡಾವಣೆಯಾಗಿ ಚಂದ್ರನ ದಕ್ಷಿಣ ಭಾಗದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಪ್ರಪಂಚದ ಎಲ್ಲ ದೇಶಗಳು ಕಾತರದಿಂದ ಕಾದು ಕುಳಿತಿದ್ದ ಈ ದಿನ ಅವಿಸ್ಮರಣೀಯ, ಐತಿಹಾಸಿಕ, ಸುವರ್ಣ ಅಕ್ಷರಗಳಲ್ಲಿ ಉಲ್ಲೇಖ ಮಾಡುವಂತಹ ದಿನವಾಗಿದೆ.
ಈ ಯಶಸ್ಸಿಗೆ ನಮ್ಮ ಇಸ್ರೋ ವಿಜ್ಞಾನಿಗಳೇ ಕಾರಣ. ಅವರ ಮೂರು ವರ್ಷಗಳ ಅವಿರತ ಶ್ರಮದ ಫಲವೇ ಇದು. ಇತ್ತೀಚಿಗೆ ರಷ್ಯಾದ ಚಂದ್ರಯಾನ ಉಡಾವಣೆ ವಿಫಲವಾದ ಮೇಲೆ ಎಲ್ಲ ದೇಶಗಳ ಚಿತ್ತ ಭಾರತದತ್ತ ಕೇಂದ್ರೀಕೃತವಾಗಿತ್ತು. ಇಂದು ಇಡೀ ಜಗತ್ತು ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳನ್ನು ಹೊಗಳುತ್ತಿದೆ. ನಮ್ಮ ದೇಶದ ಗರಿಮೆ ಪ್ರಪಂಚದಲ್ಲಿ ಎತ್ತರಕ್ಕೆ ಏರಿ ಒಂದು ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಯಶಸ್ವಿ ನೌಕೆ ಉಡಾವಣೆಯಿಂದ ಪ್ರಪಂಚದಲ್ಲಿ ಭಾರತಕ್ಕೆ ಇನ್ನಷ್ಟು ಹೆಸರು ಮತ್ತು ಕೀರ್ತಿ ಲಭಿಸಿದೆ ಎಂದರೆ ತಪ್ಪಾಗಲಾರದು ಎಂದರು.
ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮಾಧ್ಯಮ ವಕ್ತಾರ ಕೇಬಲ್ ಮಹೇಶ್, ಮುಖಂಡರಾದ ಲಕ್ಷ್ಮೀದೇವಿ, ವಿಕ್ರಮ್ ಅಯ್ಯಂಗಾರ್, ಸಂದೇಶ್ ಪವರ್, ರಾಕೇಶ್ ಭಟ್, ಬೈರತಿ ಲಿಂಗರಾಜು, ಮಧುಸೂದನ್, ಅಜಯ್ ಶಾಸ್ತ್ರಿ, ಯಶ್ವಂತ್ ಕುಮಾರ್, ಮಹೇಶ್ ಇತರರಿದ್ದರು.