

ಬಂಟ್ವಾಳ: ಪಾಣೆಮಂಗಳೂರು ನರಿಕೊಂಬು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಶುಕ್ರವಾರ ರಾತ್ರಿ ಊರಿನ ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಲಾಗಿದ್ದು, 7 ಕುಟುಂಬಗಳ ಪೈಕಿ ಮೂರು ಮಂದಿಗೆ ದ.ಕ. ಜಿಲ್ಲಾ ಪ್ರಧಾನ ನ್ಯಾಯಾಧೀಶ ರವಿ ಜೋಶಿ ಚೆಕ್ ಹಸ್ತಾಂತರಿಸಿದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ವಿವರಣೆ ನೀಡಿ, ಕ್ಷೇತ್ರದಲ್ಲಿ ಬ್ರಹ್ಮಕಲಶದ ಬಳಿಕ ನಿರಂತರ ಅನ್ನದಾನ, 160 ದಿನಗಳಿಂದ ನಿರಂತರ ಭಜನೆ ನಡೆಯುತ್ತಿದ್ದು, ಹುಂಡಿಯ ಹಣ ಹಾಗೂ ಭಕ್ತರು ನೀಡಿದ ಹಣವನ್ನು ದೇವರ ಕಾರ್ಯದ ಜತೆಗೆ ಸೇವಾ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದೇವೆ. ಜಾತ್ರೆಯ ಸಂಪೂರ್ಣ ವೆಚ್ಚವನ್ನು ನಮ್ಮೊಳಗೆ ಹಂಚಿಕೊಳ್ಳುತ್ತಿದ್ದು, ಸೇವಾ ಕಾರ್ಯಕ್ಕೆ ಮಹತ್ವ ನೀಡುತ್ತಿದ್ದೇವೆ. ಪ್ರಸ್ತುತ 7 ಅಶಕ್ತ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡಲಿದ್ದೇವೆ. ಈ ವರ್ಷ 2 ಕುಟುಂಬಗಳಿಗೆ ಮನೆ ನಿರ್ಮಾಣದ ಯೋಜನೆಯನ್ನೂ ಹಾಕಿಕೊಳ್ಳಲಾಗಿದ್ದು, ಒಂದು ಮನೆಗೆ 4-5 ಲಕ್ಷ ರೂ. ವಿನಿಯೋಗಿಸಲಿದ್ದೇವೆ ಎಂದರು.
ನ್ಯಾಯಾಧೀಶರ ಪತ್ನಿ ಗಾಯತ್ರಿ ಆರ್.ಜೋಶಿ, ಪುತ್ರ ಶ್ರೀನಿಧಿ, ಕ್ಷೇತ್ರದ ಪ್ರಮುಖರಾದ ಲೋಕೇಶ್ ಕೆ.ನರಹರಿನಗರ, ಶಂಕರನಾರಾಯಣ ರಾವ್, ನವೀನ್‌ಕುಮಾರ್, ಭುವನೇಶ್, ಪದ್ಮನಾಭ ಮಯ್ಯ ಏಲಬೆ, ಚಂದ್ರಾವತಿ, ಜಯಲಕ್ಷ್ಮೀ ಪ್ರೇಮನಾಥ ಶೆಟ್ಟಿ, ಪ್ರಸಾದ್ ಮಧೋಳಿ, ಅರ್ಚಕ ಪ್ರಸನ್ನ ಹೆಗ್ಡೆ ಮೊದಲಾದವರಿದ್ದರು. ಮೋಹನದಾಸ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
ಕ್ಷೇತ್ರದ ಜಾತ್ರೆಯು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ನಡೆಯುತ್ತಿದ್ದು, ಶುಕ್ರವಾರ ರಾತ್ರಿ ಶ್ರೀ ದೇವರ ಬಲಿ ಉತ್ಸವ, ಪುತ್ತೂರು ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.