ಸೋಮವಾರಪೇಟೆ: 2024-25 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಮುಖಾಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರಿಗೆ ಸ್ಪ್ರಿಂಕ್ಲರ್ ಸೆಟ್‌ಗೆ ಶೇ. 90ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ರೈತರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಕೃಷಿ ಸಹಾಯಕ ನಿರ್ದೇಶಕ ವೀರಣ್ಣ ತಿಳಿಸಿದ್ದಾರೆ.
ಈ ಯೋಜನೆಅಡಿ ಒಂದು ಎಕರೆ ಜಮೀನಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ರೈತರು 4,139 ರೂ, ಹಣವನ್ನು ಪಾವತಿಸುವ ಮೂಲಕ ಒಟ್ಟು 30 ಪೈಪುಗಳು, 5 ಸ್ಪ್ರಿಂಕ್ಲರ್ ಜೆಟ್‌ಗಳು ಹಾಗೂ ಇತರ ಸಾಮಗ್ರಿಗಳನ್ನು ಪಡೆಯಬಹುದಾಗಿದೆ. ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣ ಹಾಗೂ ಅರ್ಧ ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ರೈತರು 2,496 ರೂ. ಹಣವನ್ನು ಪಾವತಿಸುವುದರ ಮುಖಾಂತರ 18 ಪೈಪುಗಳು ಮತ್ತು 3 ಸಂಖ್ಯೆಯ ಜೆಟ್‌ಗಳು ಸೇರಿದಂತೆ ಇತರ ಸಾಮಗ್ರಿಗಳನ್ನು ಪಡೆಯಲು ಅವಕಾಶ ಇದೆ.
ರೈತರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರೈತ ಸಂಪರ್ಕ ಕೇಂದ್ರದಲ್ಲಿ ಉಚಿತವಾಗಿ ನೀಡುವ ಅರ್ಜಿಯೊಂದಿಗೆ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ಪಹಣಿ, ಬ್ಯಾಂಕ್ ಪಾಸ್‌ಪುಸ್ತಕ ಜೆರಾಕ್ಸ್ ಹಾಗೂ ಎರಡು ಸ್ಟ್ಯಾಂಪ್ ಅಳತೆಯ ಫೋಟೋಗಳನ್ನು ಸಲ್ಲಿಸುವುದರ ಮುಖಾಂತರ ಯೋಜನೆಯ ಸೌಲಭ್ಯ ಪಡೆಯಬಹುದು.
ನೀರಾವರಿ ಅಗತ್ಯ ಇರುವ ಸಂದರ್ಭದಲ್ಲಿ ಬೆಳೆಗೆ ತುಂತುರು ನೀರಾವರಿಯನ್ನು ಹಾಯಿಸಿ ಹೆಚ್ಚಿನ ಇಳುವರಿಯನ್ನು ಪಡೆಯಬೇಕೆಂದು ಈ ಮೂಲಕ ಕೋರಲಾಗಿದೆ. ಈ ಸೌಲಭ್ಯವನ್ನು ಸೋಮವಾರಪೇಟೆ ತಾಲೂಕು ಹಾಗೂ ಕುಶಾಲನಗರ ತಾಲೂಕು ವ್ಯಾಪ್ತಿಯ ಎಲ್ಲಾ ರೈತ ಬಾಂಧವರು ಇದರ ಸದುಪಯೋಗ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.